ಲಖನೌ, ಸೆ 25 : ಆಧುನಿಕ ಜಗತ್ತಿನಲ್ಲಿ ಮಾನವೀಯತೆ ಅನ್ನೋದು ದಿನದಿಂದ ದಿನಕ್ಕೆ ಮರೆಯಾಗುತ್ತಿದೆಯಾ? ಪ್ರಾಣ ಹೋಗುವಂತಹ ಅಪಘಾತ ಸಂಭವಿಸಿದರೂ ಕೆಲವರು ತಮ್ಮ ಸ್ವಾರ್ಥವನ್ನೇ ಮೆರೆಯುತ್ತಾರೆ ಎನ್ನುವುದಕ್ಕೆ ಉತ್ತರ ಪ್ರದೇಶದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ರಸ್ತೆಯಲ್ಲಿ ಲಾರಿ ಮಗುಚಿ ಬಿದ್ದು ಲಕ್ಷಾಂತರ ರೂ. ಮೌಲ್ಯದ ದೇಸಿ ತುಪ್ಪ ಚೆಲ್ಲಿದ್ದೇ ತಡ, ಸ್ಥಳೀಯರು ಗಾಯಾಳುಗಳಿಗೆ ಸಹಾಯ ಮಾಡುವುದನ್ನು ಬಿಟ್ಟು, ತುಪ್ಪ ಕೊಳ್ಳೆಹೊಡೆಯಲು ಮುಗಿಬಿದ್ದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಹರಿಯಾಣದಿಂದ ರುದ್ರಪುರದ ಕಾರ್ಖಾನೆಯೊಂದಕ್ಕೆ ಹೊರಟಿದ್ದ ದೇಸಿ ತುಪ್ಪದ ಲಾರಿಯೊಂದು, ಉತ್ತರ ಪ್ರದೇಶದ ಮೊರಾದಾಬಾದ್ ಬಳಿ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಮಗುಚಿ ಬಿದ್ದಿದೆ. ಈ ಅಪಘಾತದ ರಭಸಕ್ಕೆ ಲಾರಿಯಲ್ಲಿದ್ದ ನೂರಾರು ಕಂಟೈನರ್‌ಗಳ ದೇಸಿ ತುಪ್ಪ ರಸ್ತೆುದ್ದಕ್ಕೂ ಚೆಲ್ಲಾಪಿಲ್ಲಿಯಾಗಿ ಹರಿದಿದೆ.
ಪಾರಿವಾಳ ತೋರಿಸುವುದಾಗಿ ನಂಬಿಸಿ ಅಪ್ರಾಪ್ತನ ಮೇಲೆ ಲೈಂಗಿಕ ದೌರ್ಜನ್ಯ; ಕಾಮುಕನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ..!
ಲಾರಿ ಪಲ್ಟಿಯಾದ ಸದ್ದು ಕೇಳಿ ಓಡೋಡಿ ಬಂದ ಸ್ಥಳೀಯರು, ವಾಹನದಲ್ಲಿದ್ದವರ ಯೋಗಕ್ಷೇಮ ವಿಚಾರಿಸಿಲ್ಲ. ಬದಲಿಗೆ, ರಸ್ತೆಯಲ್ಲಿ ಹರಿಯುತ್ತಿದ್ದ ದೇಸಿ ತುಪ್ಪವನ್ನು ಕೊಳ್ಳೆಹೊಡೆಯಲು ಕೈಯಲ್ಲಿ ಪ್ಲಾಸ್ಟಿಕ್ ಕ್ಯಾನ್‌ಗಳು, ಡಬ್ಬಗಳು ಹಾಗೂ ಕವರ್‌ಗಳನ್ನು ಹಿಡಿದು ಮುಗಿಬಿದ್ದಿದ್ದಾರೆ. ರಸ್ತೆಯಲ್ಲೇ ಬಿಂದಿಗೆ-ಕ್ಯಾನ್‌ಗಳಲ್ಲಿ ತುಪ್ಪ ತುಂಬಿಕೊಳ್ಳುವ ಜನರ ಈ ಅಸಹ್ಯ ವರ್ತನೆ ಕಂಡು ನೆಟಿಗರು ಬೆಚ್ಚಿಬಿದ್ದಿದ್ದಾರೆ.
ಅಪಘಾತದಿಂದಾಗಿ ರಸ್ತೆಯಲ್ಲಿ ಕೆಲಕಾಲ ಭಾರಿ ವಾಹನ ಸಂಚಾರ ಅಡಚಣೆಯುಂಟಾಯಿತು. ಕೊನೆಗೆ ಸ್ಥಳಕ್ಕೆ ಬಂದ ಪೊಲೀಸರು ಗುಂಪುಗೂಡಿದ್ದ ಜನರನ್ನು ಚದುರಿಸಿ, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಅದೃಷ್ಟವಶಾತ್ ಈ ಅಪಘಾತದಲ್ಲಿ ಚಾಲಕನಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಸಂಕಷ್ಟದಲ್ಲಿದ್ದವರಿಗೆ ನೆರವಾಗುವ ಸಂಸ್ಕೃತಿ ಮಾಯವಾಗಿ, ಸಿಕ್ಕಿದ್ದನ್ನು ಬಾಚಿಕೊಳ್ಳುವ ಈ ವಿಕೃತಿಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
https://youtube.com/shorts/9nXC1d4LiQ4?feature=share