BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದೇಶ

Conviction ಪಾರಿವಾಳ ತೋರಿಸುವುದಾಗಿ ನಂಬಿಸಿ ಅಪ್ರಾಪ್ತನ ಮೇಲೆ ಲೈಂಗಿಕ ದೌರ್ಜನ್ಯ; ಕಾಮುಕನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ..!


ಮುಂಬೈ, ಸೆ 25: ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ನಡೆದಿದ್ದ ಅತ್ಯಂತ ಘೋರ ಪೋಕ್ಸೋ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯವು ಮಹತ್ವದ ಹಾಗೂ ಕಠಿಣ ತೀರ್ಪು ನೀಡಿದೆ. ಅಪ್ರಾಪ್ತ ಬಾಲಕನೊಬ್ಬನಿಗೆ ಆಮಿಷವಡ್ಡಿ ಲೈಂಗಿಕ ದೌರ್ಜನ್ಯ ಎಸಗಿದ್ದ ಕಾಮುಕನಿಗೆ ಬರೋಬ್ಬರಿ 20 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.

2020ರ ಡಿಸೆಂಬರ್ 12ರಂದು ಮಹಾರಾಷ್ಟ್ರದ ವಸೈ ತಾಲೂಕಿನಲ್ಲಿ ಈ ಘಟನೆ ನಡೆದಿತ್ತು. 14 ವರ್ಷದ ಸಂತ್ರಸ್ತ ಬಾಲಕ ತನ್ನ ಮನೆಯ ಬಳಿ ಪಾರಿವಾಳಗಳಿಗೆ ಆಹಾರ ಹಾಕುತ್ತಿದ್ದಾಗ, ನೆರೆಮನೆಯಲ್ಲಿದ್ದ 41 ವರ್ಷದ ಮಧು ಧರ್ಮ ಗೋವಾರಿ ಎಂಬಾತ ಬಾಲಕನ ಬಳಿ ಬಂದಿದ್ದಾನೆ. ನಿನಗೆ ಮರಿ ಪಾರಿವಾಳಗಳನ್ನು ತೋರಿಸುತ್ತೇನೆ ಎಂದು ನಂಬಿಸಿ ಬಾಲಕನನ್ನು ಟೆರೇಸ್‌ಗೆ ಕರೆದುಕೊಂಡು ಹೋಗಿದ್ದಾನೆ.

ಬಳಿಕ ಬಾಲಕನ ಬಾಯಿಗೆ ಬಟ್ಟೆ ತುರುಕಿ, ಕೈಗಳನ್ನು ಕಟ್ಟಿಹಾಕಿ ಕೊಠಡಿಯೊಳಗೆ ಎಳೆದುಕೊಂಡು ಹೋಗಿ ಪಾಪಿ ಮಧು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಕೃತ್ಯದ ಬಳಿಕ ಯಾರಿಗಾದರೂ ಹೇಳಿದರೆ ಜೀವ ಸಹಿತ ಬಿಡುವುದಿಲ್ಲವೆಂದು ಹಣದ ಆಮಿಷವೊಡ್ಡಿ ಬೆದರಿಕೆ ಹಾಕಿದ್ದ. ಆದರೆ ಹೇಗೋ ಆ ಕಾಮುಕನಿಂದ ತಪ್ಪಿಸಿಕೊಂಡು ಬಂದ ಬಾಲಕ, ನಡೆದ ಘಟನೆಯನ್ನು ತನ್ನ ಚಿಕ್ಕಮ್ಮನ ಬಳಿ ಹೇಳಿಕೊಂಡಿದ್ದಾನೆ. ಕೂಡಲೇ ಎಚ್ಚೆತ್ತ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ವಿಚಾರಣೆ ವೇಳೆ ಆರೋಪಿ ಪರ ವಕೀಲರು, 'ಜನನಿಬಿಡ ಪ್ರದೇಶದಲ್ಲಿ ಇಂತಹ ಕೃತ್ಯ ಎಸಗಲು ಸಾಧ್ಯವಿಲ್ಲ, ಇದು ಸುಳ್ಳು ಆರೋಪ' ಎಂದು ವಾದ ಮಂಡಿಸಿದ್ದರು. ಆದರೆ ವಾದವನ್ನು ತಳ್ಳಿಹಾಕಿದ ನ್ಯಾಯಾಲಯ, "ಜನನಿಬಿಡ ಸಾರ್ವಜನಿಕ ಸ್ಥಳಗಳಲ್ಲಿ ಜನರ ಉಪಸ್ಥಿತಿ ಸಾಮಾನ್ಯ. ಆ ಕಾರಣಕ್ಕಾಗಿ ಸಂತ್ರಸ್ತ ಬಾಲಕನ ಸಾಕ್ಷ್ಯವನ್ನು ಅನುಮಾನಿಸಲು ಬರುವುದಿಲ್ಲ" ಎಂದು ಸ್ಪಷ್ಟಪಡಿಸಿತು.

ಅಲ್ಲದೆ, ಸಂತ್ರಸ್ತ ಬಾಲಕನ ಉಡುಪಿನ ಮೇಲಿದ್ದ ವೀರ್ಯದ ಕಲೆಗಳ ವಿಧಿವಿಜ್ಞಾನ (FSL) ಪರೀಕ್ಷಾ ವರದಿಯು ಆರೋಪಿಯ ಡಿಎನ್‌ಎ ಜೊತೆ ಅಚ್ಚುಕಟ್ಟಾಗಿ ತಾಳೆಯಾಗಿದ್ದು, ಪ್ರಕರಣಕ್ಕೆ ಬಲವಾದ ಸಾಕ್ಷಿಯಾಯಿತು.

ಶಿಕ್ಷೆಯ ವಿವರ:

ಪ್ರಕರಣದ ಗಂಭೀರತೆಯನ್ನು ಪರಿಗಣಿಸಿರುವ ಪಾಲ್ಘರ್‌ನ ವಿಶೇಷ ಪೋಕ್ಸೋ ನ್ಯಾಯಾಲಯವು, ಪೋಕ್ಸೋ ಕಾಯ್ದೆಯಡಿ ಆರೋಪಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ಐಪಿಸಿ ಸೆಕ್ಷನ್ 377ರಡಿ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಇದರೊಂದಿಗೆ ಒಟ್ಟು ₹ 30,000 ದಂಡ ವಿಧಿಸಿದ್ದು, ಈ ಹಣವನ್ನು ಸಂತ್ರಸ್ತ ಬಾಲಕನ ಪುನರ್ವಸತಿಗೆ ನೀಡುವಂತೆ ಆದೇಶಿಸಿದೆ. ಜತೆಗೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಸಂತ್ರಸ್ತ ಬಾಲಕನಿಗೆ ಸರ್ಕಾರದ ನಿಯಮಾನುಸಾರ ಹೆಚ್ಚುವರಿ ಪರಿಹಾರ ಒದಗಿಸುವಂತೆಯೂ ಕೋರ್ಟ್ ಸೂಚನೆ ನೀಡಿದೆ.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!