ಮಂಗಳೂರು, ಸೆಪ್ಟೆಂಬರ್ 03:ಶ್ರೀ ಕೃಷ್ಣಾಷ್ಟಮಿ ಹಬ್ಬದ ಪ್ರಯುಕ್ತ ಮಂಗಳೂರು ನಗರದ ಬೀದಿಗಳಲ್ಲಿ ಸಾಗುತ್ತಿದ್ದ ಹೂವಿನ ವ್ಯಾಪಾರದ ಮೇಲೆ ಮಂಗಳೂರು ಮಹಾನಗರ ಪಾಲಿಕೆಯ ವಕ್ರ ದೃಷ್ಟಿ ಬಿದ್ದಿದೆ. ಗುರುವಾರ ಮಧ್ಯಾಹ್ನ ರಸ್ತೆ ಇಳಿದ ಪಾಲಿಕೆ ಅಧಿಕಾರಿಗಳು ಬೀದಿ ಬದಿ ಮಾರುತ್ತಿದ್ದ ಹೂವುಗಳನ್ನು ಕಿತ್ತುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಪಾಲಿಕೆ ಅಧಿಕಾರಿಗಳು ಮತ್ತು ಹೂವು ವ್ಯಾಪಾರಸ್ತರ ಮಧ್ಯೆ ಮಾತಿನ ಚಕಮಕಿ ನಡೆದು, ಕಾರ್ಯಾಚರಣೆಗೆ ಬಂದ ಪಾಲಿಕೆ ಲಾರಿಯನ್ನು ವ್ಯಾಪಾರಿಗಳು ತಡೆದು ಆಕ್ರೋಶ ವ್ಯಕ್ತಪಡಿಸಿದರು. ಮಂಗಳೂರು ಮಹಾನಗರ ಪಾಲಿಕೆ (ಎಂಸಿಸಿ) ಈ ಕಾರ್ಯಾಚರಣೆಯನ್ನು ಡಿವೈಎಫ್‌ಐ ಜಿಲ್ಲಾ ಅಧ್ಯಕ್ಷ ಬಿ.ಕೆ. ಇಮ್ತಿಯಾಜ್ ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಅವರು, ಹಬ್ಬದ ವಿಶೇಷ ಸಂದರ್ಭದಲ್ಲಿ ಮಾತ್ರ ಹೂವಿನ ಮಾರಾಟ ಇರುತ್ತದೆ. ಇಂತಹ ಸಂದರ್ಭದಲ್ಲಿ ಹಬ್ಬದ ವ್ಯಾಪಾರಕ್ಕೂ ಅವಕಾಶ ನೀಡದೆ ಇರುವುದು ಜನರ ಆಚರಣೆಯ ಹಕ್ಕನ್ನು ಹತ್ತಿಕ್ಕಿದಂತೆ ಎಂದು ದೂರಿದ್ದಾರೆ. ಅಲ್ಲದೆ, ಹಬ್ಬದ ಸಂಭ್ರಮದಲ್ಲಿರುವ ಬಡ ವ್ಯಾಪಾರಿಗಳ ಮೇಲೆ ಪಾಲಿಕೆಯ ಈ ದಬ್ಬಾಳಿಕೆ ಸಲ್ಲದು ಎಂದು ಬಿ.ಕೆ. ಇಮ್ತಿಯಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೂವಿನ ವ್ಯಾಪಾರಿಗಳ ಪ್ರತಿಭಟನೆ ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ CITU ಬೆಂಬಲ ವ್ಯಕ್ತಪಡಿಸಿದ್ದಾರೆ.