BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

Surathkal ಸುರತ್ಕಲ್ ನಲ್ಲಿ ಸಮುದಾಯ ಆಸ್ಪತ್ರೆ, ಮಂಗಳೂರಿನಲ್ಲಿ ಜಯದೇವ, ಕಿದ್ವಾಯಿ, ನಿಮ್ಹಾನ್ಸ್ ಘಟಕಗಳ ಸ್ಥಾಪನೆಗೆ ಆಗ್ರಹ,ಕಾಟಿಪಳ್ಳದಿಂದ ಸುರತ್ಕಲ್ ವರಗೆ ಬೃಹತ್ ಕಾಲ್ನಡಿಗೆ ಜಾಥಾ



ಸುರತ್ಕಲ್, ಅ.02 : ಸುರತ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಬೇಕು, ಕಿದ್ವಾಯಿ, ಜಯದೇವ, ನಿಮ್ಹಾನ್ಸ್ ಆಸ್ಪತ್ರೆಗಳ ಘಟಕಗಳನ್ನು ಮಂಗಳೂರಿನಲ್ಲಿ ಸ್ಥಾಪಿಸಬೇಕು ಎಂದು ಆಗ್ರಹಿಸಿ "ಸರಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ" ನೇತೃತ್ವದಲ್ಲಿ ಕಾಟಿಪಳ್ಳ ಸಂಶುದ್ದೀನ್ ವೃತ್ತದಿಂದ ಸುರತ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದವರಗೆ ಬೃಹತ್ ಕಾಲ್ನಡಿಗೆ ಜಾಥಾ ನಡೆಯಿತು. ಪರಿಸರದ ಹಲವಾರು ಸಂಘ ಸಂಸ್ಥೆಗಳ ಬೆಂಬಲದೊಂದಿಗೆ ಕಾಲ್ನಡಿಗೆ ಜಾಥಾ ದಲ್ಲಿ ಸ್ಥಳೀಯರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು‌.

ಸಂಶುದ್ದೀನ್ ವೃತ್ತದಲ್ಲಿ ಪಣಂಬೂರು ಮುಸ್ಲಿಮ್ ಜಮಾತ್ ಅಧ್ಯಕ್ಷರಾದ ಹಾಜಿ ರಹ್ಮತುಲ್ಲಾ ಅವರು ರಾಷ್ಟ್ರ ಧ್ವಜವನ್ನು  ಜಾಥಾ ಸಂಘಟಕರಿಗೆ ಹಸ್ತಾಂತರಿಸುವ ಮೂಲಕ ಕಾಲ್ನಡಿಗೆ ಜಾಥಾಗೆ ಚಾಲನೆ ನೀಡಿದರು. ದಾರಿಯುದ್ದಕ್ಕೂ ಹಲವು ಸಂಘ ಸಂಸ್ಥೆಗಳು ಕಾಲ್ನಡಿಗೆಯಲ್ಲಿ ಭಾಗವಹಿಸಿದವರಿಗೆ ಪಾನೀಯದ ವ್ಯವಸ್ಥೆ ಮಾಡಿದ್ದರು.

ಸುರತ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗ ನಡೆದ ಜಾಥಾದ ಸಮಾರೋಪ ಸಭೆಯಲ್ಲಿ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕ ಮುನೀರ್ ಕಾಟಿಪಳ್ಳ ಮಾತನಾಡಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾರ್ವಜನಿಕ ಆರೋಗ್ಯ ಸೇವೆ ತೀರಾ ದುರ್ಬಲಗೊಂಡಿದೆ. ನರರೋಗ, ಕ್ಯಾನ್ಸರ್, ಹೃದಯದ ಖಾಯಿಲೆಗಳು ಭಾದಿಸಿದರೆ ಜನಸಾಮಾನ್ಯರು ಮನೆ ಮಠ ಮಾರಾಟ ಮಾಡಿ ಬೀದಿಗೆ ಬರುವ ಸ್ಥಿತಿ ನಿರ್ಮಾಣವಾಗಿದೆ. ಖಾಸಗಿ ಆಸ್ಪತ್ರೆಗಳ ಸುಲಿಗೆ ನೀತಿಗೆ ಹೆದರಿ ಕಡಿಮೆ ಆದಾಯದ ಜನರು ರೋಗ ಲಕ್ಷಣಗಳು ಕಾಣಿಸಿಕೊಂಡರೂ ಆಸ್ಪತ್ರೆಗೆ ತೆರಳಲು ಭಯಪಡುತ್ತಿದ್ದಾರೆ. ಸುರತ್ಕಲ್ ನಂತಹ ಕೈಗಾರಿಕಾ ಪಟ್ಟಣದಲ್ಲಿ  ಸರಕಾರಿ ಸಮುದಾಯ ಆಸ್ಪತ್ರೆ ಇಲ್ಲದಿರುವುದು ನಾಚಿಕೆಗೇಡು. ಇದು ಸ್ಥಳೀಯ ಶಾಸಕರ ವೈಫಲ್ಯವನ್ನು, ಜನಸಾಮಾನ್ಯರ ಸಮಸ್ಯೆಗಳಿಗೆ ಶಾಸಕರು ಕುರುಡಾಗಿರುವುದನ್ನು ಎತ್ತಿತೋರಿಸುತ್ತದೆ. ಪೆಟ್ರೋಕೆಮಿಕಲ್ ಉದ್ಯಮಗಳ ಮಾರಕ ಮಾಲಿನ್ಯದಿಂದಾಗಿ ಸುರತ್ಕಲ್ ಹೋಬಳಿ ವಿವಿಧ ಖಾಯಿಲೆಗಳ ಗೂಡಾಗಿ ಪರಿವರ್ತನೆಗೊಂಡಿದೆ. ಸುರತ್ಕಲ್ ಗೆ ಸಮುದಾಯ ಆಸ್ಪತ್ರೆ ತಕ್ಷಣ ಮಂಜೂರು ಆಗಲೆಬೇಕು, ಸುರತ್ಕಲ್  ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸುವ ಈ ಹಿಂದಿನ ಎರಡು ಪ್ರಸ್ತಾಪಗಳು ಆರೋಗ್ಯ ಇಲಾಖೆ ತಿರಸ್ಕರಿಸಿರುವುದು ನಮಗೆ ನಿರಾಸೆ ಮೂಡಿಸಿದೆ. ಇದಕ್ಕೆ ಶಾಸಕ ಭರತ್ ಶೆಟ್ಟರ ಕರ್ತವ್ಯಲೋಪ, ಜನರ ಬೇಡಿಕೆಗಳ ಕುರಿತಾದ ತಾತ್ಸಾರ ಮನೋಭಾವವೆ ಕಾರಣ ಎಂದು ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದರು. ಸುರತ್ಕಲ್ ಹೋಬಳಿಗೆ ಸಮುದಾಯ ಆಸ್ಪತ್ರೆಯ ಬೇಡಿಕೆಯನ್ನು ಕಡೆಗಣಿಸಿದರೆ, ಕಿದ್ವಾಯಿ, ಜಯದೇವದ ಘಟಕ ಸ್ಥಾಪನೆಯ ಭರವಸೆ ತಕ್ಷಣವೇ ಈಡೇರದಿದ್ದರೆ ಸುರತ್ಕಲ್ ನಲ್ಲಿ ಅನಿರ್ಧಿಷ್ಟಾವಧಿ ಧರಣಿ ಆರಂಭಿಸುವುದಾಗಿ ಅವರು ಎಚ್ಚರಿಸಿದರು.

ಸಾಮಾಜಿಕ ಮುಂದಾಳು ಟಿ ಎನ್ ರಮೇಶ್, ಸಿರಾಜ್ ಬಜ್ಪೆ, ಕಾರ್ಮಿಕ ನಾಯಕ ಬಿ ಕೆ ಇಮ್ತಿಯಾಜ್ ಸಭೆಯನ್ನುದ್ದೇಶಿಸಿ ಮಾತನಾಡಿದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸದಾಶಿವ ಪಡುಬಿದ್ರೆ, ಮುಖಂಡರಾದ ಕೃಷ್ಣಾನಂದ ಡಿ, ಡಿವೈಎಫ್ಐ ಜಿಲ್ಲಾಧ್ಯಕ್ಷ ಅಡ್ವಕೇಟ್ ಮನೋಜ್ ವಾಮಂಜೂರು, ಕಾರ್ಯದರ್ಶಿ ರಿಜ್ವಾನ್ ಹರೇಕಳ, ದಲಿತ ಹಕ್ಕುಗಳ ಸಮಿತಿಯ ಮುಖಂಡರಾದ ಕೃಷ್ಣಾ ತಣ್ಣೀರುಬಾವಿ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಜಿಲ್ಲಾ ಮುಖಂಡರಾದ ಕೃಷ್ಣಾ ಇನ್ನಾ, ಜಯ ಮದ್ಯ, ಕಟ್ಟಡ ಹಾಗು ನಿರ್ಮಾಣ ಕಾರ್ಮಿಕರ ಸಂಘದ ಮುಂದಾಳುಗಳಾದ ರವಿಚಂದ್ರ ಕೊಂಚಾಡಿ, ಯೋಗೀಶ್ ಜಪ್ಪಿನಮೊಗರು, ಬಜ್ಪೆ ಪಟ್ಟಣ ಪಂಚಾಯತ್ ಸದಸ್ಯ ಸಿರಾಜ್ ಬಜ್ಪೆ, ವಿವಿಧ ಸಂಘ ಸಂಸ್ಥೆಗಳ ಪ್ರಮುಖರಾದ ಅಜ್ಮಲ್ ಕಾನ, ಅಶ್ಪಕ್ ರಿಲಯನ್ಸ್, ಫಾರೂಕ್ ಆಟೋ,  ಸಂಶೀರ್ ಕಾಟಿಪಳ್ಳ, ನಿಸಾರ್ ಬದ್ರಿಯಾ, ನಜೀರ್ ಕೆವೈಸಿ, ಹುಸೈನ್ ಕಾಟಿಪಳ್ಳ, ತಾಜ್ ಫಿಷ್ ಅಶ್ರಫ್, ಮಕ್ಸೂದ್ ಬಿ ಕೆ, ಇಮ್ತಿಯಾಜ್ ಕುಳಾಯಿ, ರಫಿ ಕಾಟಿಪಳ್ಳ, ಮತ್ತಿತರರು ಉಪಸ್ಥಿತರಿದ್ದರು.

 ಶ್ರೀನಾಥ್ ಕುಲಾಲ್, ಸಮದ್ ಕಾಟಿಪಳ್ಳ, ಸಲೀಂ ಶ್ಯಾಡೊ ಕಾರ್ಯಕ್ರಮ ನಿರ್ವಹಿಸಿದರು

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!