ಮಂಗಳೂರು, ಸೆ 24 : ನಗರದ ಪಾಂಡೇಶ್ವರದಲ್ಲಿರುವ ಶ್ರೀನಿವಾಸ ಕಾಲೇಜಿನಲ್ಲಿ ರ‍್ಯಾಗಿಂಗ್ ಚಾಳಿ ಮತ್ತೆ ಮುಂದುವರೆದಿದೆ. ಇಲ್ಲಿನ ಪ್ರಥಮ ವರ್ಷದ ವಿದ್ಯಾರ್ಥಿಯೊಬ್ಬರ ಮೇಲೆ ಹಿರಿಯ ವಿದ್ಯಾರ್ಥಿಗಳ ಗುಂಪೊಂದು ಹಲ್ಲೆ ನಡೆಸಿ, ಅಪಹರಿಸಿ ಜೀವ ಬೆದರಿಕೆ ಹಾಕಲಾಗಿದೆ. ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ 9 ವಿದ್ಯಾರ್ಥಿಗಳ ಮೇಲೆ ದೂರು ದಾಖಲಾಗಿದೆ.
ಘಟನೆಯ ವಿವರ:
ಆಗಸ್ಟ್ 19ರಂದು ಮಧ್ಯಾಹ್ನ ಫಿರ್ಯಾದುದಾರ ವಿದ್ಯಾರ್ಥಿ ಹಾಗೂ ಅವರ ಸ್ನೇಹಿತ ಮಹಮ್ಮದ್ ಅಲ್ಫಾಜ್ ಕಾಲೇಜಿನಿಂದ ಹೊರನಡೆದು ಹೋಗುತ್ತಿದ್ದ ವೇಳೆ, ಆರೋಪಿಗಳಾದ ನಾಸೀದ್ ಅಮೀರ್ ಎಂಬಾತ ಮುಂಭಾಗದಿಂದ ಬಂದು ಕಾಲೇಜಿನ ಬಗ್ಗೆ ಮಾತನಾಡಬೇಕಿದೆ ಎಂದು ತಡೆದಿದ್ದಾನೆ. ಬಳಿಕ ಇತರೆ ಆರೋಪಿಗಳಾದ ಆದಿಲ್ ಎಂ., ಅರ್ಷಕ್, ಅನೀಶ್, ಉವೈಸ್, ನಾಸೀದ್ ಅಮೀರ್, ರೇಖಾನ್ ರಮೇಶ್ ಹಾಗೂ ಆದಿಲ್ ವಿ.ಪಿ. ಸೇರಿದಂತೆ ಮತ್ತಿತರರು ಸೇರಿಕೊಂಡು ವಿದ್ಯಾರ್ಥಿಗಳನ್ನು ಬಲವಂತವಾಗಿ ಬೈಕ್‌ನಲ್ಲಿ ಕೂರಿಸಿಕೊಂಡು ಅಪಹರಿಸಿ ಕರೆದೊಯ್ದಿದ್ದಾರೆ.
ಬೆಲ್ಟ್, ಹ್ಯಾಂಗರ್ ಹಾಗೂ ಕಬ್ಬಿಣದ ಪಂಚಿಂಗ್‌ನಿಂದ ಹಲ್ಲೆ:
ಒಂದು ಮನೆಗೆ ಕರೆದೊಯ್ದು ವಿದ್ಯಾರ್ಥಿಗಳ ಬಟ್ಟೆಗಳನ್ನು ಬಿಚ್ಚಿಸಿ, ಅಮಾನವೀಯವಾಗಿ ಥಳಿಸಲಾಗಿದೆ. ಆರೋಪಿಗಳಾದ ನಾಸೀದ್ ಅಮೀರ್ ಬೆಲ್ಟ್‌ನಿಂದಲೂ, ಆದಿಲ್ ಎಂ. ಹ್ಯಾಂಗರ್‌ನಿಂದಲೂ ಹಾಗೂ ರೇಖಾನ್ ಎಂ.ಪಿ. ಕಬ್ಬಿಣದ ಪಂಚಿಂಗ್‌ನಿಂದ ವಿದ್ಯಾರ್ಥಿಗಳ ತಲೆ ಹಾಗೂ ಹಣೆಯ ಭಾಗಕ್ಕೆ ಬಲವಾಗಿ ಹೊಡೆದು ಗಾಯಗೊಳಿಸಿದ್ದಾರೆ. ಹಲ್ಲೆಯಿಂದ ಸುಸ್ತಾದ ವಿದ್ಯಾರ್ಥಿಗಳು ಕುಡಿಯಲು ನೀರು ಕೇಳಿದಾಗ ಕಲುಷಿತ ನೀರನ್ನು ಕುಡಿಸಿ, ವೀಡಿಯೊ ಚಿತ್ರೀಕರಿಸಲಾಗಿದೆ.
ಕೊಲೆ ಬೆದರಿಕೆ ಮತ್ತು ರ‍್ಯಾಗಿಂಗ್ ಕೃತ್ಯ:
ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಕಾಲೇಜಿನಲ್ಲಿ ಚಾಕುವಿನಿಂದ ತುಂಡು ತುಂಡಾಗಿ ಕತ್ತರಿಸಿ ಕೊಲೆ ಮಾಡುವುದಾಗಿ ಆರೋಪಿಗಳು ಬೆದರಿಕೆ ಹಾಕಿದ್ದಾರೆ. ಪ್ರಾಣಭಯದಿಂದ ತರಗತಿಗೆ ಬಾರದಂತೆ ಹೆದರಿಸಲಾಗಿದ್ದು, ನಂತರ ವಿದ್ಯಾರ್ಥಿಯು ಮನೆಯವರ ಸಲಹೆಯಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು 9 ಮಂದಿ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.
ಮಂಗಳೂರು: ಕಾಲೇಜುಗಳಲ್ಲಿ ಹೆಚ್ಚುತ್ತಿರುವ ರ‍್ಯಾಗಿಂಗ್ ಕೃತ್ಯ; ಡಿವೈಎಫ್‌ಐ ತೀವ್ರ ಕಳವಳ, ಕಠಿಣ ಕ್ರಮಕ್ಕೆ ಆಗ್ರಹ