ಮಂಗಳೂರು, ಸೆ 26: ಮಂಗಳೂರಿನಲ್ಲಿ ಸರ್ವ ಕಾಲೇಜು ಚುನಾವಣೆ ಹಾಗೂ ಪದಗ್ರಹಣ ಸಮಾರಂಭದ ಸಂಭ್ರಮದಲ್ಲಿದ್ದ ವಿದ್ಯಾರ್ಥಿಗಳಿಗೆ ಆಘಾತಕಾರಿ ಘಟನೆಯೊಂದು ಎದುರಾಗಿದೆ. ನಗರದ ಪಾಂಡೇಶ್ವರದ ರಾಮಲಕ್ಷ್ಮೀನಾರಾಯಣ ಕನ್ವೆನ್ಷನ್ ಹಾಲ್‌ನಲ್ಲಿ ಈ ದುರ್ಘಟನೆ ಸಂಭವಿಸಿದ್ದು ಓರ್ವ ಸಾವನ್ನಪ್ಪಿದ್ದು , ಇತರ ನಾಲ್ವರು ವಿದ್ಯಾರ್ಥಿಗಳು ಗಂಭೀರ ಗಾಯಗೊಂಡಿದ್ದಾರೆ.
ಘಟನೆ ಹಿನ್ನೆಲೆ
ಸರ್ವ ಕಾಲೇಜು ಚುನಾವಣೆ ಹಾಗೂ ಪದಗ್ರಹಣ ಸಮಾರಂಭ ಸಂದರ್ಭ ಹಾಲಿನ ಒಂದನೇ ಮಹಡಿಯ ಬಾಲ್ಕನಿಯಲ್ಲಿ ನೂರಾರು ವಿದ್ಯಾರ್ಥಿಗಳು ಜಮಾಯಿಸಿದ್ದರು. ಈ ವೇಳೆ ಹಲವರು ಬಾಲ್ಕನಿಯ ದಂಡೆಗೆ ಒರಗಿ ನಿಂತಿದ್ದರಿಂದ, ಇದ್ದಕ್ಕಿದ್ದಂತೆ ತಡೆಗೋಡೆಯು (Balcony Parapet Wall) ಆಕಸ್ಮಿಕವಾಗಿ ಕುಸಿದು ಕೆಳಗಿನ ಮುಖ್ಯ ರಸ್ತೆಯ ಆವರಣ ಗೋಡೆಯ ಮೇಲೆ ಬಿದ್ದಿದೆ.
ಈ ದುರ್ಘಟನೆಯಲ್ಲಿ ಐವರು ವಿದ್ಯಾರ್ಥಿಗಳು ಕೇಳಕ್ಕೆ ಬಿದ್ದು ಗಂಭೀರ ಗಾಯಗಳಾಗಿದ್ದುವು. ಹಳೆಯಂಗಡಿಯ ಮಹಮ್ಮದ್ ಶಮಾಜ್(16), ಸೂರಿಂಜೆಯ ಮಹಮ್ಮದ್ ಶನಾನ್ ಅಹ್ಮದ್(18), ಅಡ್ಯಾರ್‌ನ ಹನೀಫ್(23) , ಕಾವೂರ್‌ನ ದಾವೂದ್ ಫರ್ಸಿನ್ ಅಹ್ಮದ್(18), ಮಂಗಳೂರು ಕಸ್ಬಾ ಬೆಂಗ್ರೆಯ ಮಹಮ್ಮದ್ ಶಾಕೀಲ್ ಹುಸೈನ್(18) ಗಾಯಗೊಂಡ ವಿದ್ಯಾರ್ಥಿಗಳಾಗಿದ್ದಾರೆ.
ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ತುರ್ತು ಚಿಕಿತ್ಸೆ ನೀಡಲಾಯಿತಾದ್ರೂ ಅದರಲ್ಲಿ ಓರ್ವ ವಿದ್ಯಾರ್ಥಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಸ್ಥಳಕ್ಕೆ ಪಾಂಡೇಶ್ವರ ಪೊಲೀಸರು ಹಾಗೂ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.