ಮಂಗಳೂರು,ಸೆ 24: ಮಂಗಳೂರು ನಗರದ ವಿವಿಧ ಕಾಲೇಜುಗಳಲ್ಲಿ ರ‍್ಯಾಗಿಂಗ್ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ, ಹಲ್ಲೆ, ಅವಮಾನ ಮತ್ತು ಬೆದರಿಕೆ ಹಾಕುತ್ತಿರುವ ಘಟನೆಗಳು ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಈ ಕುರಿತು ಡಿವೈಎಫ್‌ಐ (DYFI) ತೀವ್ರ ಕಳವಳ ವ್ಯಕ್ತಪಡಿಸಿದೆ.
ಹೊರ ರಾಜ್ಯಗಳಿಂದ ವಿದ್ಯಾಭ್ಯಾಸಕ್ಕಾಗಿ ಮಂಗಳೂರಿನ ಖಾಸಗಿ ಕಾಲೇಜುಗಳಿಗೆ ಬರುವ ಅಮಾಯಕ ವಿದ್ಯಾರ್ಥಿಗಳು ರ‍್ಯಾಗಿಂಗ್‌ಗೆ ಒಳಗಾಗಿ ತೀವ್ರ ಭಯ ಹಾಗೂ ಮಾನಸಿಕ ಒತ್ತಡಕ್ಕೆ ಸಿಲುಕುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಸಂಘಟನೆ ತಿಳಿಸಿದೆ.
ಪಾಂಡೇಶ್ವರ ಕಾಲೇಜಿನ ಸರಣಿ ದೂರುಗಳ ಬಗ್ಗೆ ತನಿಖೆಗೆ ಒತ್ತಾಯ:
ಇತ್ತೀಚೆಗೆ ಮಂಗಳೂರಿನ ಪಾಂಡೇಶ್ವರದ ಖಾಸಗಿ ಕಾಲೇಜೊಂದರಿಂದ ಸರಣಿ ರ‍್ಯಾಗಿಂಗ್ ದೂರುಗಳು ಕೇಳಿಬರುತ್ತಿರುವುದು ಆತಂಕ ಮೂಡಿಸಿದೆ. ಒಂದೇ ಶಿಕ್ಷಣ ಸಂಸ್ಥೆಯಿಂದ ನಿರಂತರವಾಗಿ ಇಂತಹ ದೂರುಗಳು ಬರುತ್ತಿರುವುದರ ಹಿಂದೆ ಇರುವ ಕಾರಣಗಳನ್ನು ಪೊಲೀಸ್ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಗಂಭೀರವಾಗಿ ಪರಿಶೀಲಿಸಬೇಕು. ವಿದ್ಯಾರ್ಥಿಗಳಿಂದ ಬಂದಿರುವ ದೂರುಗಳನ್ನು ನಿರ್ಲಕ್ಷಿಸದೆ, ನಿಷ್ಪಕ್ಷಪಾತ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಬೇಕೆಂದು ಡಿವೈಎಫ್‌ಐ ಒತ್ತಾಯಿಸಿದೆ.
ಆಡಳಿತ ಮಂಡಳಿಗಳ ಬೇಜವಾಬ್ದಾರಿತನಕ್ಕೆ ಖಂಡನೆ:
ಕ್ಯಾಂಪಸ್‌ಗಳಲ್ಲಿ ರ‍್ಯಾಗಿಂಗ್ ಸಂಪೂರ್ಣ ನಿಷೇಧವಿದ್ದರೂ ಇಂತಹ ಘಟನೆಗಳು ಮರುಕಳಿಸುತ್ತಿರುವುದು ಕಾಲೇಜು ಆಡಳಿತ ಮಂಡಳಿಗಳ ಸಂಪೂರ್ಣ ಬೇಜವಾಬ್ದಾರಿತನವನ್ನು ತೋರಿಸುತ್ತದೆ. ವಿದ್ಯಾರ್ಥಿಗಳಿಂದ ಲಕ್ಷಾಂತರ ರೂಪಾಯಿ ಶುಲ್ಕ ವಸೂಲಿ ಮಾಡುವುದರಲ್ಲಿ ಮಾತ್ರ ಆಸಕ್ತಿ ತೋರುವ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿಗಳ ಸುರಕ್ಷತೆ ಮತ್ತು ರಕ್ಷಣೆಯಂತಹ ಮೂಲಭೂತ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ವಿಫಲವಾಗಿರುವುದು ಖಂಡನೀಯ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕ್ಯಾಂಪಸ್‌ಗಳಲ್ಲಿ ಭಯಮುಕ್ತ ಹಾಗೂ ಸುರಕ್ಷಿತ ಶೈಕ್ಷಣಿಕ ವಾತಾವರಣ ನಿರ್ಮಿಸುವ ಬದಲು, ಕೇವಲ ವಾಣಿಜ್ಯ ಲಾಭದತ್ತ ಗಮನಹರಿಸುವ ಇಂತಹ ಶಿಕ್ಷಣ ಸಂಸ್ಥೆಗಳ ವ್ಯಾಪಾರ ಧಂಧೆಯ ವಿರುದ್ಧ ಎಲ್ಲರೂ ಧ್ವನಿ ಎತ್ತುವ ಅಗತ್ಯವಿದೆ ಎಂದು ಡಿವೈಎಫ್‌ಐ ಆಗ್ರಹಿಸಿದೆ.