BREAKING
ರಾಜ್ಯ

Yellapura ಯಲ್ಲಾಪುರದಲ್ಲಿ ಭೀಕರ ರಸ್ತೆ ಅಪಘಾತ, 6 ಮಂದಿ ಯುವಕರು ಮೃತ್ಯು

ಯಲ್ಲಾಪುರ, ಜುಲೈ 09 : ಉತ್ತರ ಕನ್ನಡ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ಆರತಿಬೈಲಿನಲ್ಲಿ ಈ ಭೀಕರ ಅಪಘಾತ ನಡೆದಿದೆ.  ಲಾರಿ ಮತ್ತು ಕ್ರೂಸರ್ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ 6 ಮಂದಿ ಸಾವನ್ನಪ್ಪಿದ್ದಾರೆ. 

 ಮೂಲಗಳ ಪ್ರಕಾರ ಮೃತರೆಲ್ಲರೂ ಧಾರವಾಡ ಮೂಲದವರಾಗಿದ್ದು, ಗೋಕರ್ಣ, ಮುರುಡೇಶ್ವರ ಹಾಗೂ ಧರ್ಮಸ್ಥಳದ ಧಾರ್ಮಿಕ ಕ್ಷೇತ್ರಗಳ ಪ್ರವಾಸಕ್ಕಾಗಿ ಹೊರಟಿದ್ದರು ಎಂದು ತಿಳಿದುಬಂದಿದೆ.

ಮೃತಪಟ್ಟವರೆಲ್ಲರೂ ಡೆಲಿವರಿ ಬಾಯ್ಸ್ ಕೆಲಸ ಮಾಡುತ್ತಿದ್ದ ಸ್ನೇಹಿತರಾಗಿದ್ದಾರೆ. ಪ್ರತಿನಿತ್ಯದ ಕೆಲಸದ ಒತ್ತಡದಿಂದ ಕೊಂಚ ಬಿಡುವು ಮಾಡಿಕೊಂಡು, ದೇವಸ್ಥಾನಗಳ ದರ್ಶನ ಹಾಗೂ ಪ್ರವಾಸದ ಖುಷಿಯಲ್ಲಿದ್ದ ಯುವಕರಿಗೆ ವಿಧಿಯೇ ಸಂಚು ರೂಪಿಸಿತ್ತು. 

ಒಟ್ಟು 9 ಜನರಿದ್ದ ಈ ಸ್ನೇಹಿತರ ತಂಡವು ಧಾರವಾಡದಿಂದ ಅಂಕೋಲಾ ಮಾರ್ಗವಾಗಿ ಕರಾವಳಿಯತ್ತ ಪ್ರಯಾಣ ಬೆಳೆಸುತ್ತಿತ್ತು. ಈ ವೇಳೆ ಯಲ್ಲಾಪುರ ತಾಲೂಕಿನ ಅರಬೈಲ್ ಘಾಟ್ ನ ಅಪಾಯಕಾರಿ ತಿರುವಿನಲ್ಲಿ ಎದುರಿನಿಂದ ಬಂದ ಲಾರಿ, ಇವರು ಚಲಿಸುತ್ತಿದ್ದ ಕ್ರೂಸರ್ ವಾಹನಕ್ಕೆ ಬಲವಾಗಿ ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ. 

ಕ್ರೂಸರ್ ಧಾರವಾಡದಿಂದ ಅಂಕೋಲಾ ಕಡೆ ತೆರಳುತ್ತಿದ್ದು, ಲಾರಿ ಯಲ್ಲಾಪುರದಿಂದ ಅಂಕೋಲಾ ಕಡೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. 

ಕ್ರೂಸರ್‌ನಲ್ಲಿ ಇದ್ದ ಧಾರವಾಡದ ಬಸವರಾಜ್, ಮಂಜುನಾಥ್ ಚುಲ್ಲಕ್ಕಿ, ಅಭಿಷೇಕ್ ಮಲ್ಲೇಶ್ ಮಡಬಾವಿ, ಅಕ್ಷಯ್ ಮಲ್ಲಣ್ಣನವರ್ ಮೃತಪಟ್ಟಿದ್ದಾರೆ.

ಉಳಿದ ಇಬ್ಬರ ಗುರುತು ಪತ್ತೆಯಾಗಬೇಕಿದೆ. 

ಮೃತರನ್ನ ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!