ಬೆಂಗಳೂರು: ಕನ್ನಡ ಚಿತ್ರರಂಗದ 'ಅಭಿನಯ ಚಕ್ರವರ್ತಿ' ಕಿಚ್ಚ ಸುದೀಪ್ ಅವರ ಐಷಾರಾಮಿ ಜೀವನಶೈಲಿ ಹಾಗೂ ದುಬಾರಿ ಕಾರುಗಳ ಮೇಲಿನ ಕ್ರೇಜ್ ಇಡೀ ಗಾಂಧಿನಗರಕ್ಕೆ ಗೊತ್ತು. ಇದೀಗ ಅವರು ತಮ್ಮ ಹೊಸ ಡ್ರೀಮ್ ಕ್ಯಾರವಾನ್ ಮೂಲಕ ಇಡೀ ಸ್ಯಾಂಡಲ್‌ವುಡ್ ಹೌಹಾರುವಂತೆ ಮಾಡಿದ್ದಾರೆ. ಬರೋಬ್ಬರಿ 6.5 ಕೋಟಿ ರೂಪಾಯಿ ಮೌಲ್ಯದ ವಿನೂತನ ಐಷಾರಾಮಿ ಕ್ಯಾರವಾನ್ ಒಂದನ್ನು ಸುದೀಪ್ ಕಸ್ಟಮೈಸ್ ಮಾಡಿಸಿದ್ದು, ಇದು ಸದ್ಯ ಕನ್ನಡ ಸಿನಿರಂಗದಲ್ಲೇ ಅತ್ಯಂತ ದುಬಾರಿ ಕ್ಯಾರವಾನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸದ್ಯ ಬಿಗ್ ಬಜೆಟ್‌ನ 'ಬಿಲ್ಲ ರಂಗ ಭಾಷಾ' ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ಸುದೀಪ್, ಈ ಕ್ಯಾರವಾನ್ ಅನ್ನು ತಮ್ಮ ವೈಯಕ್ತಿಕ ಇಷ್ಟಕ್ಕೆ ತಕ್ಕಂತೆ ವಿಶೇಷವಾಗಿ ವಿನ್ಯಾಸಗೊಳಿಸಿದ್ದಾರೆ.
ಬಾಲಿವುಡ್ ಸ್ಟಾರ್ಸ್ ಶೈಲಿಯಲ್ಲಿ ಡಿಸೈನ್!
ಸುದೀಪ್ ಅವರ ಆಪ್ತ ಮೂಲಗಳ ಪ್ರಕಾರ, ಪುಣೆಯ ಪ್ರಸಿದ್ಧ ಆಟೋಮೊಬೈಲ್ ಉದ್ಯಮಿ ದಿಲೀಪ್ ಛಾಬ್ರಿಯಾ ಅವರ ಮಾಲೀಕತ್ವದ 'DC2' ಸಂಸ್ಥೆಯ ಮೂಲಕ ಈ ಕ್ಯಾರವಾನ್ ಅನ್ನು ವಿಶೇಷವಾಗಿ ಕಸ್ಟಮೈಸ್ ಮಾಡಿಸಲಾಗಿದೆ. ಇದೇ ಡಿಸೈನರ್ ಈ ಹಿಂದೆ ಬಾಲಿವುಡ್‌ನ ಸೂಪರ್ ಸ್ಟಾರ್‌ಗಳಾದ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಅವರಿಗೂ ಅದ್ಭುತ ಕ್ಯಾರವಾನ್‌ಗಳನ್ನು ಸಿದ್ಧಪಡಿಸಿಕೊಟ್ಟಿದ್ದರು ಎಂಬುದು ಗಮನಾರ್ಹ. ಸದ್ಯ ಈ ಐಷಾರಾಮಿ ಕ್ಯಾರವಾನ್ ಬೆಂಗಳೂರು ತಲುಪಿದ್ದು, ಇದರ ಪಾರ್ಕಿಂಗ್‌ಗೆ ಸುದೀಪ್ ಅವರ ತಾಂತ್ರಿಕ ತಂಡ ಸೂಕ್ತ ವ್ಯವಸ್ಥೆ ಮಾಡುತ್ತಿದೆ.
ಕ್ಯಾರವಾನ್ ಒಳಗೆ 5 ಸ್ಟಾರ್ ಹೋಟೆಲ್ ವೈಭೋಗ!
ಕನ್ನಡ ಚಿತ್ರರಂಗದಲ್ಲಿ ಇಷ್ಟು ದೊಡ್ಡ ಮೊತ್ತದ ಕ್ಯಾರವಾನ್ ಹೊಂದಿರುವ ಮೊದಲ ನಟ ಎಂಬ ಕೀರ್ತಿ ಈಗ ಸುದೀಪ್ ಪಾಲಾಗಿದೆ. ಇದರ ಒಳಾಂಗಣ ವಿನ್ಯಾಸವನ್ನು ನೋಡಿದರೆ ಐದು ನಕ್ಷತ್ರಗಳ (5-Star) ಹೋಟೆಲ್ ಕೂಡ ಫೇಲ್ ಆಗುವಂತಿದೆ. ಇದರಲ್ಲಿ ವಿಶಾಲವಾದ ಐಷಾರಾಮಿ ಬೆಡ್‌ರೂಮ್, ವರ್ಕೌಟ್ ಮಾಡಲು ಅತ್ಯಾಧುನಿಕ ಹೈಟೆಕ್ ಜಿಮ್, ಸುಸಜ್ಜಿತವಾದ ಕಿಚನ್ ಹಾಗೂ ಅತ್ಯುತ್ತಮ ಬಾತ್‌ರೂಮ್ ವ್ಯವಸ್ಥೆ ಸೇರಿದಂತೆ ಎಲ್ಲಾ ರೀತಿಯ ಹೈ-ಫೈ ಸೌಲಭ್ಯಗಳನ್ನು ಅಳವಡಿಸಲಾಗಿದೆ. ಶೂಟಿಂಗ್ ಸೆಟ್‌ಗಳಲ್ಲಿ ನಟರಿಗೆ ಯಾವುದೇ ಕೊರತೆಯಾಗದಂತೆ ಇದನ್ನು ಸಿದ್ಧಪಡಿಸಲಾಗಿದೆ.
ಶೂಟಿಂಗ್ ಅಖಾಡಕ್ಕಿಳಿದ 'ಬಿಲ್ಲ ರಂಗ ಭಾಷಾ'!
ಇನ್ನೊಂದೆಡೆ ಕಿಚ್ಚ ಸುದೀಪ್ ಅಭಿನಯದ ಸೈನ್ಸ್ ಫಿಕ್ಷನ್ ಆ್ಯಕ್ಷನ್ ಕಥಾಹಂದರ ಹೊಂದಿರುವ ಬಹುನಿರೀಕ್ಷಿತ 'ಬಿಲ್ಲ ರಂಗ ಭಾಷಾ' (BRB) ಚಿತ್ರದ ಶೂಟಿಂಗ್ ಜೂನ್ 26ರಿಂದ ಭರ್ಜರಿಯಾಗಿ ಆರಂಭಗೊಂಡಿದೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದ ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ, "ದಿ ವೈಟ್ ಎಂಡ್ಸ್, ದಿ ವಾರ್ ಬಿಗಿನ್ಸ್! ನಿಮ್ಮ ಪ್ರೀತಿ ಕಡಿಮೆಯಾಗಲಿಲ್ಲ, ನಮ್ಮ ನಂಬಿಕೆ ಕುಗ್ಗಲಿಲ್ಲ" ಎಂದು ಬರೆದುಕೊಂಡಿದ್ದರು.
ಅಲ್ಲದೆ ಸ್ವತಃ ನಟ ಸುದೀಪ್ ಅವರೂ ಚಿತ್ರದ ಫಸ್ಟ್ ಲುಕ್ ಹಂಚಿಕೊಂಡು, "2209 ಎಡಿ - ಬಿಆರ್ಬಿ ಫಸ್ಟ್ ಬ್ಲಡ್, ಇಂದಿನಿಂದ ಪ್ರಯಾಣ ಆರಂಭ. ಇದು ನಮ್ಮ ಇಡೀ ತಂಡದ ಬೃಹತ್ ಕನಸು" ಎಂದು ಬರೆದುಕೊಂಡು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದ್ದಾರೆ.
