ವಿಜಯವಾಡ, ಜುಲೈ 06 : ಚಲಿಸುತ್ತಿದ್ದ ಕಾರಿನ ಬ್ರೇಕ್ ಮತ್ತು ಕ್ಲಚ್ ಪೆಡಲ್ ಮಧ್ಯೆ ಎಳನೀರು ಸಿಕ್ಕಿಹಾಕಿಕೊಂಡ ಪರಿಣಾಮ ಕಾರು ಅಘಾತಗೊಂಡು ಇಬ್ಬರು ಸಾವನ್ನಪ್ಪಿದ ದಾರುಣ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ಸಂಭವಿಸಿದೆ.
ಈ ಭೀಕರ ಅಪಘಾತದಲ್ಲಿ ಅಪಘಾತದಲ್ಲಿ ಅರ್ಚಕ ಸೇರಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ನಿಯಂತ್ರಣ ತಪ್ಪಿದ ಕಾರು ದ್ವಿಚಕ್ರ ವಾಹನ ಹಾಗೂ ಕಂಟೇನರ್ ಲಾರಿಗೆ ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ.
ಅಪಘಾತ ಹೇಗಾಯಿತು ?
ಆಂಧ್ರಪ್ರದೇಶದ ಎನ್‌ಟಿಆರ್ ಜಿಲ್ಲೆಯ ಜಕ್ಕಂಪುಡಿ ಪ್ರದೇಶದ ವಿಜಯವಾಡ ಬೈಪಾಸ್‌ನಲ್ಲಿ ಈ ದುರ್ಘಟನೆ ನಡೆದಿದೆ. ಮಗನ ಮದುವೆ ಮುಗಿಸಿಕೊಂಡು ಮನೆಗೆ ಹೊರಟಿದ್ದ ಅರ್ಚಕ ಸೇರಿದಂತೆ ಇಬ್ಬರು ಭೀಕರ ರಸ್ತೆ ಅಪಘಾತದಲ್ಲಿ ಅಸುನೀಗಿದ್ದಾರೆ. ಕಾರಿನ ಬ್ರೇಕ್ ಮತ್ತು ಕ್ಲಚ್ ನಡುವೆ ಎಳನೀರು ಸಿಲುಕಿಕೊಂಡಿರುವುದೇ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ರಾಜಮಹೇಂದ್ರವರಂನ ದುವ್ವುರಿ ಹರಿಪ್ರಸಾದ್ (52) ಮೃತಪಟ್ಟ ಅರ್ಚಕರು. ಅವರ ಕಿರಿಯ ಮಗನ ಮದುವೆ ಗುರುವಾರ ಹೈದರಾಬಾದ್‌ನಲ್ಲಿರುವ ವಧುವಿನ ಸ್ವಗೃಹದಲ್ಲಿ ನಡೆದಿತ್ತು. ಶುಕ್ರವಾರ ಮಧ್ಯಾಹ್ನ, ಕುಟುಂಬ ಸದಸ್ಯರು ಒಂದು ಕಾರಿನಲ್ಲಿ ರಾಜಮಹೇಂದ್ರವರಂಗೆ ಹೊರಟಿದ್ದರು. ಮತ್ತೊಂದು ಕಾರಿನಲ್ಲಿ ಪೂಜಾ ಸಾಮಗ್ರಿಗಳೊಂದಿಗೆ ಹರಿಪ್ರಸಾದ್ ಮತ್ತು ಹಿಂದಿನ ಸೀಟಿನಲ್ಲಿ ಅವರ ಸಂಬಂಧಿ ತೆರಳುತ್ತಿದ್ದರು.
ಬಳಿಕ, ವಿಜಯವಾಡ ಬಳಿಯ ನಲ್ಲಗುಂಟದಲ್ಲಿ ಹರಿಪ್ರಸಾದ್ ಅವರ ಸಂಬಂಧಿ ಕಾರಿನಿಂದ ಇಳಿದಿದ್ದಾರೆ. ನಂತರ ಗೊಲ್ಲಪುಡಿ ಬೈಪಾಸ್ ರಸ್ತೆಯ ಬಳಿ ತೆರಳುತ್ತಿದ್ದಂತೆ, ಕಾರು ನಿಯಂತ್ರಣ ತಪ್ಪಿ ಪಕ್ಕದಲ್ಲಿದ್ದ ದ್ವಿಚಕ್ರ ವಾಹನ ಮತ್ತು ಕಂಟೇನರ್‌ಗೆ ಡಿಕ್ಕಿ ಹೊಡೆದಿದೆ. ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಾಗ, ಕಾರಿನ ಹಿಂದಿನ ಸೀಟಿನಲ್ಲಿದ್ದ ಎಳನೀರು ಹಾರಿ ಹೋಗಿ ಬ್ರೇಕ್ ಮತ್ತು ಕ್ಲಚ್ ನಡುವೆ ಸಿಲುಕಿಕೊಂಡಿರಬಹುದು. ಇದರ ಪರಿಣಾಮ ಕಾರು ನಿಯಂತ್ರಣ ತಪ್ಪಿ ಕಂಟೇನರ್‌ಗೆ ಡಿಕ್ಕಿ ಹೊಡೆದಿರುವ ಸಾಧ್ಯತೆಯಿದೆ. ಪರಿಣಾಮ ಕಾರು ಚಲಾಯಿಸುತ್ತಿದ್ದ ಹರಿಪ್ರಸಾದ್ ಹಾಗೂ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಮದುವೆಯ ಸಂಭ್ರಮದಲ್ಲಿದ್ದ ಮನೆಯಲ್ಲಿ ಯಜಮಾನನನ್ನು ಕಳೆದುಕೊಂಡು ಸೂತಕದ ಛಾಯೆ ಆವರಿಸಿದೆ.
