BREAKING
ದಕ್ಷಿಣ ಕನ್ನಡ

Mangaluru ಸುರತ್ಕಲ್ ಮಸೀದಿಗೆ ನುಗ್ಗಿ ಉಸ್ತಾದರ ಮೇಲೆ ಹಲ್ಲೆ ಆರೋಪ, ವ್ಯಾಪಕ ಖಂಡನೆ ಕ್ರಮಕ್ಕೆ ಆಗ್ರಹ

 ಮಂಗಳೂರು , ಜುಲೈ 09 : ಸುರತ್ಕಲ್ ಸಮೀಪದ ಕೃಷ್ಣಾಪುರ ಪ್ರದೇಶದಲ್ಲಿರುವ ತ್ವೈಬಾ ಮಸೀದಿಯಲ್ಲಿ ಧಾರ್ಮಿಕ ಪಾಠ (ಇಲ್ಮ್) ನಡೆಯುತ್ತಿದ್ದ ವೇಳೆ ಉಸ್ತಾದರ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.



ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಮದರಸದಲ್ಲಿ ಓದುತ್ತಿದ್ದ ಮಗುವಿಗೆ ಶಿಕ್ಷೆ ನೀಡಿದ ವಿಚಾರವನ್ನು ಹಿನ್ನೆಲೆಯಾಗಿ ಮಾಡಿಕೊಂಡು, ಮಗುವಿನ ಪೋಷಕರು ಹಾಗೂ ಕುಟುಂಬದ ಕೆಲವರು ಮಸೀದಿಗೆ ನುಗ್ಗಿ ಉಸ್ತಾದರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಘಟನೆಗೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿರುವ ಹಿನ್ನೆಲೆಯಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.


ಕೃಷ್ಣಾಪುರ ಉಸ್ತಾದ್ ಮೇಲಿನ ಹಲ್ಲೆ ಖಂಡನೀಯ: ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಇಕ್ಬಲ್ ಮೂಲ್ಕಿ ಆಗ್ರಹ

ಸುರತ್ಕಲ್ ಕೃಷ್ಣಾಪುರದಲ್ಲಿ ಉಸ್ತಾದರೊಬ್ಬರ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಮಾಜಿ ಅಧ್ಯಕ್ಷರು, ಮದ್ರಸ ಮೆನೇಜಮೆಂಟ್ ಸುರತ್ಕಲ್ ಹಾಗೂ ಜೆಡಿಎಸ್ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಾಧ್ಯಕ್ಷ ಇಕ್ಬಲ್ ಮೂಲ್ಕಿ ತೀವ್ರವಾಗಿ ಖಂಡಿಸಿದ್ದಾರೆ.



ಪತ್ರಿಕಾ ಹೇಳಿಕೆಯಲ್ಲಿ ಅವರು, ಧಾರ್ಮಿಕ ಶಿಕ್ಷಣದ ಮೂಲಕ ಸಮಾಜದಲ್ಲಿ ನೈತಿಕತೆ ಮತ್ತು ಶಿಸ್ತು ಬೆಳೆಸುವ ಉಸ್ತಾದರ ಮೇಲೆ ಹಲ್ಲೆ ನಡೆಸಿರುವುದು ನಾಗರಿಕ ಸಮಾಜವೇ ತಲೆತಗ್ಗಿಸುವ ಕೃತ್ಯ ಎಂದು ಹೇಳಿದ್ದಾರೆ. ಯಾವುದೇ ಅಸಮಾಧಾನ ಅಥವಾ ದೂರುಗಳಿದ್ದರೆ ಕಾನೂನಿನ ಚೌಕಟ್ಟಿನೊಳಗೆ ಪರಿಹರಿಸಬೇಕೇ ಹೊರತು, ಕಾನೂನನ್ನು ಕೈಗೆತ್ತಿಕೊಂಡು ಹಲ್ಲೆ ನಡೆಸುವುದು ಒಪ್ಪಲಾಗದು ಎಂದಿದ್ದಾರೆ.


ಉಸ್ತಾದರ ವಿರುದ್ಧ ಯಾವುದೇ ಆರೋಪಗಳಿದ್ದರೂ, ಮಸೀದಿ ಆಡಳಿತ ಮಂಡಳಿ, ಮದರಸಾ ಸಮಿತಿ ಅಥವಾ ಪೊಲೀಸ್ ಇಲಾಖೆಯ ಮೂಲಕ ಕಾನೂನುಬದ್ಧ ಕ್ರಮ ಕೈಗೊಳ್ಳುವ ಅವಕಾಶವಿದೆ. ಹಲ್ಲೆಗೆ ಮುಂದಾಗಿರುವುದು ಕಾನೂನು ಮತ್ತು ಸುವ್ಯವಸ್ಥೆಗೆ ಸವಾಲು ಹಾಕಿದಂತಾಗಿದ್ದು, ಘಟನೆಗೆ ಸಂಬಂಧಿಸಿದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!