BREAKING
ರಾಜ್ಯ
ದೇಶ
ವಿದೇಶ
ಕ್ರೀಡೆ
ಸಿನಿಮಾ
ಉಡುಪಿ
ರಾಜ್ಯ

Karwar ಉತ್ತರ ಕನ್ನಡದಲ್ಲೂ ವರುಣನ ಆರ್ಭಟ, ಮನೆ ಮೇಲೆ ಗುಡ್ಡ ಕುಸಿತ, ಕುಮಟಾ ಸಿರಸಿ ಹೆದ್ದಾರಿಯಲ್ಲೂ ಅನಾಹುತ

ಕಾರವಾರ, ಜುಲೈ 02: ಉತ್ತರ ಕನ್ನಡ ಜಿಲ್ಲೆಯಲ್ಲೂ ಭಾರಿ ಮಳೆಯಾಗುತ್ತಿದ್ದು ಆನೇಕ ಕಡೆ ಮಳೆಯಿಂದ ಅನಾಹುತಗಳು ಸಂಭವಿಸಿವೆ.



ಸುರಿಯುತ್ತಿರುವ ಭಾರೀ ಮಳೆಯ ನಡುವೆಯೇ ಜಿಲ್ಲೆಯ ಕುಮಟಾ ತಾಲೂಕಿನ ಮೂರೂರು ಗ್ರಾಮದಲ್ಲಿ ಗುಡ್ಡ ಕುಸಿತ ಸಂಭವಿಸಿ ಮನೆಯೊಂದಕ್ಕೆ ಹಾನಿಯಾಗಿದೆ.

ಮೂರೂರು ಗ್ರಾಮದ ನಿವಾಸಿ ರಾಮಚಂದ್ರ ಪಿ. ಭಟ್ ಅವರ ಮನೆಯ ಸಮೀಪದ ಗುಡ್ಡ ಕುಸಿದ ಪರಿಣಾಮ ಬೃಹತ್ ಬಂಡೆಕಲ್ಲೊಂದು ಮನೆಗೆ ಅಪ್ಪಳಿಸಿದೆ. ಇದರಿಂದ ಮನೆಯ ಒಂದು ಭಾಗದ ಗೋಡೆಗೆ ಹಾನಿಯಾಗಿದ್ದು,ಮನೆಯವರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಅದೃಷ್ಟವಶಾತ್ ಘಟನೆ ವೇಳೆ ಮನೆಯಲ್ಲಿದ್ದ ಜನರಿಗೆ ಯಾವುದೇ ರೀತಿಯ ಪ್ರಾಣಾಪಾಯ ಅಥವಾ ಗಾಯಗಳಾಗಿಲ್ಲ. ಘಟನೆಯಿಂದ ಐವತ್ತು ಸಾವಿರಕ್ಕೂ ಅಧಿಕ‌ ಹಾನಿ ಉಂಟಾಗಿದೆ‌ ಎನ್ನಲಾಗಿದೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ಗುಡ್ಡ ಪ್ರದೇಶಗಳ ಸಮೀಪ ವಾಸಿಸುವ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

 ಮತ್ತೊಂದೆಡೆ ಸಿರಸಿ - ಕುಮಟಾ ಹೆದ್ದಾರಿಯಲ್ಲಿ ಗುಡ್ಡ ಕುಸಿದು ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ಭಾರಿ ಪ್ರಮಾಣದಲ್ಲಿ ಮಣ್ಣು ಮತ್ತು ಮರಗಳು ಹೆದ್ದಾರಿಗೆ ಬಿದ್ದ ಪರಿಣಾಮ ಸುಮಾರು ಒಂದು ಗಂಟೆಗಳ ಕಾಲ ಹೆದ್ದಾರಿ ಬಂದ್ ಮಾಡಲಾಗಿತ್ತು. ಬಳಿಕ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಅಗತ್ಯ ಪರಿಹಾರ ಕಾರ್ಯಕೈಗೊಂಡರು.  

ಮುಂಜಾಗೃತಾ ಕ್ರಮವಾಗಿ ಉತ್ತರ ಕನ್ನಡ ಜಿಲ್ಲೆಯಲ್ಲೂ ಇಂದು ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. 

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!