ಮಡಿಕೇರಿ, ಜುಲೈ 09 : ಕರ್ನಾಟಕದ ಜೀವನದಿ ಕಾವೇರಿ ಕಣಿವೆ ಪ್ರದೇಶಗಳಲ್ಲಿ ಕಳೆದ ಕೆಲ ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಮಳೆ ನೀರನ್ನೇ ನಂಬಿಕೊಂಡಿರುವ ಕಾಫಿ ಬೆಳೆಗಾರರು, ರೈತಾಪಿ ವರ್ಗ ಹರ್ಷಗೊಂಡಿದ್ದಾರೆ. ಕೊಡಗು, ಭಾಗಮಂಡಲಗಳಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆ ಆರ್‌ಎಸ್ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದೆ.
ಕೊಡಗಿನಲ್ಲಿ ಮಳೆ ಬಿರುಸುಗೊಂಡಿದ್ದು ನದಿ ನೀರಿನ ಮಟ್ಟ ಏರಿಕೆಯಾಗುತ್ತಲೇ ಇದೆ. ಭಾಗಮಂಡಲ ಮತ್ತು ಪೊನ್ನಂಪೇಟೆಯಲ್ಲಿ ಕಳೆದ 24 ಗಂಟೆಗಳಲ್ಲಿ ತಲಾ 7 ಇಂಚು ಮಳೆ ದಾಖಲಾಗಿದೆ. ವಿರಾಜಪೇಟೆ ಹೋಬಳಿ ಅರಮೇರಿ-ಚಾಮಿಯಾಲ ಸಂಪರ್ಕ ಸೇತುವೆಯು ಸಂಪೂರ್ಣ ಜಲಾವೃತವಾಗಿದ್ದು, ಇಲ್ಲಿ ಕೂಡ ಮುನ್ನೆಚ್ಚರಿಕೆ ಕ್ರಮವಾಗಿ ಬ್ಯಾರಿಕೇಡ್ ಹಾಕಲಾಗಿದೆ. ಮಡಿಕೇರಿ ತಾಲ್ಲೂಕಿನಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಮೈಕೊರೆಯುವ ಚಳಿಯ ವಾತಾವರಣವಿದೆ.
ಕೊಡಗು ಜಿಲ್ಲೆಯಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 60.45 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 19.29 ಮಿ.ಮೀ. ಮಳೆಯಾಗಿತ್ತು. ವಿರಾಜಪೇಟೆ ತಾಲ್ಲೂಕು ಅಮ್ಮತಿ ಹೋಬಳಿ ಕರಡಿಗೋಡು ಕಾವೇರಿ ನದಿ ಪಾತ್ರದಲ್ಲಿರುವ ಹೊಳೆಕೆರೆಯಲ್ಲಿ ಕರಡಿಗೋಡು ಚಿಕ್ಕನಳ್ಳಿ ಸಂಪರ್ಕ ರಸ್ತೆ ಪ್ರವಾಹದಿಂದ ಕಡಿತ ಗೊಂಡಿದೆ. ನೂಡಲ್ ಅಧಿಕಾರಿಗಳು, ಕಂದಾಯ ಪರಿವೀಕ್ಷಕರು, ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ರಸ್ತೆಯಲ್ಲಿ ಬ್ಯಾರಿಕೆಡ್ ಅಳವಡಿಸಿ ಸಂಚಾರ ನಿಷೇಧಿಸಿದ್ದಾರೆ.
ಹಾರಂಗಿ ಜಲಾಶಯದ ನೀರಿನ ಮಟ್ಟ ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2838.68 ಅಡಿಗಳು. ಕಳೆದ ವರ್ಷ ಇದೇ ದಿನ 2852.31 ಅಡಿಗಳು. ಹಾರಂಗಿಯಲ್ಲಿ ಬಿದ್ದ ಮಳೆ 9.20 ಮಿ.ಮೀ., ಕಳೆದ ವರ್ಷ ಇದೇ ದಿನ 1.80 ಮಿ.ಮೀ., ಇಂದಿನ ನೀರಿನ ಒಳಹರಿವು 2090 ಕ್ಯುಸೆಕ್, ಕಳೆದ ವರ್ಷ ಇದೇ ದಿನ 4686 ಕ್ಯುಸೆಕ್., ಇಂದಿನ ನೀರಿನ ಹೊರ ಹರಿವು ನದಿಗೆ 180 ಕ್ಯುಸೆಕ್. ಕಳೆದ ವರ್ಷ ಇದೇ ದಿನ ನೀರಿನ ಹೊರ ಹರಿವು ನದಿಗೆ 7083 ಕ್ಯುಸೆಕ್ ಇತ್ತು.