ಮಂಗಳೂರು, ಜುಲೈ 20: ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಹಸ್ತಾಂತರಿಸುವ ಸರ್ಕಾರದ ಕ್ರಮವನ್ನು ಹಿಂಪಡೆಯಬೇಕು, ವೆನ್ಲಾಕ್ ಜಿಲ್ಲಾ ಆಸ್ಪತ್ರೆಯನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಬೇಕು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ ಹಾಗೂ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ಘಟಕಗಳನ್ನು ಸ್ಥಾಪಿಸಬೇಕು ಮತ್ತು ನಗರ ಆರೋಗ್ಯ ಕೇಂದ್ರಗಳಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಗುತ್ತಿಗೆ ನೌಕರರನ್ನು ಕಾಯಂಗೊಳಿಸಬೇಕು ಎಂದು ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಮಂಗಳೂರು ನಗರ ಸಮಿತಿಯ ನೇತೃತ್ವದಲ್ಲಿ ಸೋಮವಾರ ನಗರದ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಎದುರು ಪ್ರತಿಭಟನೆ ಹಾಗೂ ಮಾನವ ಸರಪಳಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಿಪಿಐ(ಎಂ) ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ಆರೋಗ್ಯ ಕ್ಷೇತ್ರವನ್ನು ಖಾಸಗೀಕರಣಗೊಳಿಸುವುದು ಸಂವಿಧಾನ ನೀಡಿರುವ ಸಮಾನ ಆರೋಗ್ಯ ಹಕ್ಕಿಗೆ ಧಕ್ಕೆ ತರುವ ಕ್ರಮವಾಗಿದೆ. ಬಡವರು ಮತ್ತು ಮಧ್ಯಮ ವರ್ಗದ ಜನರು ಸರ್ಕಾರಿ ಆಸ್ಪತ್ರೆಗಳನ್ನೇ ಅವಲಂಬಿಸಿದ್ದು, ಅವುಗಳನ್ನು ದುರ್ಬಲಗೊಳಿಸಿ ಖಾಸಗಿ ವಲಯಕ್ಕೆ ಒಪ್ಪಿಸುವ ನೀತಿಯನ್ನು ಸರ್ಕಾರ ತಕ್ಷಣವೇ ಕೈಬಿಡಬೇಕು ಎಂದು ಒತ್ತಾಯಿಸಿದರು. ಆರೋಗ್ಯ ಕ್ಷೇತ್ರದಲ್ಲಿ ಸರ್ಕಾರ ಹೂಡಿಕೆಯನ್ನು ಹೆಚ್ಚಿಸಿ, ಸಾರ್ವಜನಿಕ ಆಸ್ಪತ್ರೆಗಳನ್ನು ಆಧುನೀಕರಿಸಬೇಕೆಂದು ಹೇಳಿದರು.
ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನೀಲ್ ಕುಮಾರ್ ಬಜಾಲ್ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯ ಜನರು ಹೃದಯ ಹಾಗೂ ಕ್ಯಾನ್ಸರ್ ಚಿಕಿತ್ಸೆಗೆ ದೂರದ ನಗರಗಳಿಗೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಜಯದೇವ ಮತ್ತು ಕಿದ್ವಾಯಿ ಆಸ್ಪತ್ರೆಗಳ ಘಟಕಗಳನ್ನು ಜಿಲ್ಲೆಯಲ್ಲಿ ಆರಂಭಿಸಿದರೆ ಸಾವಿರಾರು ರೋಗಿಗಳಿಗೆ ಅನುಕೂಲವಾಗಲಿದೆ. ವೆನ್ಲಾಕ್ ಆಸ್ಪತ್ರೆಯನ್ನು ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳೊಂದಿಗೆ ಅಭಿವೃದ್ಧಿಪಡಿಸುವ ಮೂಲಕ ಜಿಲ್ಲೆಯ ಜನರಿಗೆ ಗುಣಮಟ್ಟದ ಚಿಕಿತ್ಸೆ ಒದಗಿಸಬೇಕೆಂದು ಆಗ್ರಹಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಿಪಿಐ(ಎಂ) ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಉಳಿಸುವುದು ಜನಪರ ಸರ್ಕಾರದ ಜವಾಬ್ದಾರಿಯಾಗಿದೆ. ಆಸ್ಪತ್ರೆಗಳ ಖಾಸಗೀಕರಣದ ಮೂಲಕ ಆರೋಗ್ಯ ಸೇವೆಯನ್ನು ವ್ಯಾಪಾರವಾಗಿಸಲು ನಡೆಸುತ್ತಿರುವ ಪ್ರಯತ್ನವನ್ನು ಜನರು ಒಗ್ಗಟ್ಟಿನಿಂದ ವಿರೋಧಿಸಬೇಕು. ನಗರ ಆರೋಗ್ಯ ಕೇಂದ್ರಗಳಲ್ಲಿ ಹಲವು ವರ್ಷಗಳಿಂದ ದುಡಿಯುತ್ತಿರುವ ಗುತ್ತಿಗೆ ನೌಕರರನ್ನು ಯಾವುದೇ ವಿಳಂಬವಿಲ್ಲದೆ ಕಾಯಂಗೊಳಿಸಿ, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕೆಂದು ಒತ್ತಾಯಿಸಿದರು. ಈ ಬೇಡಿಕೆಗಳು ಈಡೇರುವವರೆಗೆ ಪಕ್ಷದ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.
ಸಂತೋಷ್ ಬಜಾಲ್, ಬಿ.ಕೆ. ಇಮ್ತಿಯಾಜ್ ಹಾಗೂ ಪ್ರಮೀಳಾ ಶಕ್ತಿನಗರ ಸಭೆಯನ್ನುದ್ದೇಶಿಸಿ ಮಾತನಾಡಿದರು. ಸಭೆಯಲ್ಲಿ ಪಕ್ಷದ ಜಿಲ್ಲಾ ಮುಖಂಡರಾದ ಜಯಂತಿ ಬಿ. ಶೆಟ್ಟಿ, ಬಾಲಕೃಷ್ಣ ಶೆಟ್ಟಿ. ಅಖಿಲ ಭಾರತ ವಕೀಲರ ಸಂಘದ ಜಿಲ್ಲಾ ಅಧ್ಯಕ್ಷರಾದ ಯಶವಂತ ಮರೋಳಿ ಉಪಸ್ಥಿತರಿದ್ದರು.
ಪ್ರತಿಭಟನೆಯ ನೇತೃತ್ವವನ್ನು ಶಶಿಧರ ಶಕ್ತಿನಗರ, ಲೋಕೇಶ್ ಎಂ., ದೀಪಕ್ ಬಜಾಲ್, ದಿನೇಶ್ ಶೆಟ್ಟಿ, ಜಯಲಕ್ಷ್ಮಿ ಜಪ್ಪಿನಮೊಗರು, ತಯ್ಯೂಬ್ ಬೆಂಗರೆ , ನಾಗೇಶ್ ಕೋಟ್ಯಾನ್, ಶ್ರೀನಾಥ್ ಕಾಟಿಪಳ್ಳ, ಅಶೋಕ್ ಶ್ರಿಯಾನ್ , ರವಿಚಂದ್ರ ಕೊಂಚಾಡಿ, ನವೀನ್ ಕೊಂಚಾಡಿ, ಕೃಷ್ಣ ತಣ್ಣೀರುಬಾವಿ, ಆಶಾ ಬೋಳೂರು, ಬಿ.ಕೆ. ಮಕ್ಸೂದ್, ಉದಯಚಂದ್ರ ರೈ, ನೌಶಾದ್ ಬೆಂಗರೆ, ನಾಸಿರ್ ಬೆಂಗರೆ, ಜಗದೀಶ್ ಬಜಾಲ್, ಗೀತಾ ಜಲ್ಲಿಗುಡ್ಡೆ ಹಾಗೂ ಜಯಪ್ರಕಾಶ್ ವಹಿಸಿದ್ದರು.

