ಬಂಟ್ವಾಳ, ಜುಲೈ 15 : ದಶಕಗಳ ಇತಿಹಾಸವಿರುವ ದಕ್ಷಿಣ ಕನ್ನಡ ಜಿಲ್ಲೆಯ ಬಂಟವಾಳ ರೈಲ್ವೆ ನಿಲ್ದಾಣ ಹೊಸ ರೂಪದಲ್ಲಿ ಕಂಗೊಳಿಸುತ್ತಿದ್ದು ಇದೇ ಜುಲೈ 17 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಲೋಕಾರ್ಪಣೆಗೊಳಿಸಲಿದ್ದಾರೆ.
ಲೋಕಾರ್ಪಣಾ ಸಮಾರಂಭದಲ್ಲಿ ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ರೈಲ್ವೇ ಸಚಿವರಾದ ಅಶ್ವಿನಿ ವೈಷ್ಣವ್, ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಉಪ ಮುಖ್ಯಮಂತ್ರಿ ಡಾ. ಪರಮೇಶ್ವರ, ಕೆಮದ್ರ ಸಚಿವ ವಿ ಸೋಮಣ್ಣ, ಜಿಲ್ಲಾ ಉಸ್ತುವಾರಿ ಸಚಿವ ಯು ಟಿ ಖಾದರ್, ಸಂಸದ ಕ್ಯಾ. ಬ್ರಿಜೇಶ್ ಚೌಟ, ಸ್ಥಳೀಯ ಶಾಸಕ ರಾಜೇಶ್ ನಾಯಕ್ ಸೇರಿದಂತೆ ಅನೇಕ ಗಣ್ಯರು, ರೈಲ್ವೇ ವಿಭಾಗದ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ ಸುಮಾರು 26.18 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಮೂಲ ಸೌಕರ್ಯಗಳೊಂದಿಗೆ ಪುನರ್ ಅಭಿವೃದ್ದಿಗೊಂಡಿದೆ. ದೂರ ದೃಷ್ಟಿ ಮತ್ತು ಪ್ರಯಾಣಿಕರ ಅನುಕೂಲತೆಗಳಿಗಾಗಿ ರೈಲ್ವೇ ನಿಲ್ದಾಣದ ಪ್ರಮುಖ ಭಾಗವಾಗಿರುವ ನಿರೀಕ್ಷಣಾ ಮಂದಿರಗಳು ಮತ್ತು ಟಿಕೆಟ್ ಬುಕ್ಕಿಂಗ್ ಕೌಂಟರುಗಳ ಸುಧಾರಣೆ ಮಾಡಲಾಗಿದೆ. ನಿಲ್ದಾಣದಲ್ಲಿ ಹೆಚ್ಚಿನ ಸ್ಥಳ, ಪ್ರಯಾಣಿಕರಿಗೆ ಕುಳಿತುಕೊಳ್ಳುವ ವ್ಯವಸ್ಥೆ ಮತ್ತು ಪ್ರಯಾಣಿಕರಿಗೆ ಹೆಚ್ಚುವರಿ ಅನುಕೂಲತೆಗಳನ್ನು ಒದಗಿಸಲಾಗಿದೆ. ನಿಲ್ದಾಣದ ಸಮೀಪ ವಾಹನಗಳ ಸಂಚಾರವನ್ನು ಸರಳಗೊಳಿಸಲು ಡ್ರಾಪ್-ಆಫ್ ಮತ್ತು ಪಿಕ್-ಅಪ್ ಪ್ರದೇಶಗಳನ್ನು ಪ್ರತ್ಯೇಕವಾಗಿ ವಿನ್ಯಾಸಗೊಳಿಸಲಾಗಿದೆ. ಇದರಿಂದ ಸಂಚಾರ ದಟ್ಟಣೆ ಕಡಿಮೆಯಾಗಲಿದ್ದು ಸುರಕ್ಷತೆ ಹೆಚ್ಚಾಗಿರಲಿದೆ.
ಪ್ಲಾಟ್ ಫಾರ್ಮ್ ಮೂಲ ಸೌಕರ್ಯವನ್ನು ಬಲಪಡಿಸಲಾಗಿದ್ದು ಪೂರ್ಣ ಉದ್ದದ ಪ್ಲಾಟ್ ಫಾರ್ಮ್ ಶೆಲ್ಟರುಗಳನ್ನು ಒದಗಿಸಲಾಗಿದೆ, ಇದರಿಂದ ಎಲ್ಲ ಹವಾಮಾನ ಪರಿಸ್ಥಿತಿಗಳಲ್ಲಿಯೂ ಪ್ರಯಾಣಿಕರಿಗೆ ರಕ್ಷಣೆ ಸಿಗುತ್ತದೆ. ಜೊತೆಗೆ, ನಿಲ್ದಾಣ ಕಟ್ಟಡದ ಮುಂಭಾಗದಲ್ಲಿನ ಪ್ಲಾಟ್ ಫಾರ್ಮ್ ಮೇಲ್ಮೈ ಸುಧಾರಣೆ ಮಾಡಲಾಗಿದ್ದು, ಸುರಕ್ಷತೆ, ದೀರ್ಘಾವಧಿ ಬಳಕೆ ಮತ್ತು ಸುಲಭ ಸಂಚಾರಕ್ಕೆ ಅನುಕೂಲವಾಗಿರುವಂತೆ ವಿನ್ಯಾಸಗೊಳಿಸಲಾಗಿದೆ. ನಿಲ್ದಾಣದ ಒಳಾಂಗಣಕ್ಕೂ ಆಧೂನಿಕ ಸ್ಪರ್ಷ ನೀಡಲಾಗಿದೆ., ಫರ್ನಿಚರ್, ಬೆಳಕು ವ್ಯವಸ್ಥೆ ಮತ್ತು ಲ್ಯಾಂಡ್ ಸ್ಕೇಪಿಂಗ್ ಕಾರ್ಯಗಳನ್ನು ಮಾಡಲಾಗಿದೆ. ಇದರಿಂದ ನಿಲ್ದಾಣ ಇನ್ನೂ ಆಕರ್ಷಕವಾಗಿ ಕಾಣುತ್ತಿದೆ.
ವಿದ್ಯುತ್ ವ್ಯವಸ್ಥೆಯಲ್ಲಿ ಮಹತ್ವದ ಸುಧಾರಣೆಗಳನ್ನು ಮಾಡಲಾಗಿದೆ. ಉನ್ನತ ಮಟ್ಟದ ಬೆಳಕು ವ್ಯವಸ್ಥೆ, ಎಲ್ ಇ ಡಿ ಪ್ಲಾಟ್ ಫಾರ್ಮ್ ಹೆಸರು ಫಲಕಗಳು, ಎಲ್ ಇ ಡಿ ಸೈನ್ ಬೋರ್ಡುಗಳು ಮತ್ತು ಫಸಾಡ್ ಲೈಟಿಂಗ್ ಅಳವಡಿಸಲಾಗಿದೆ, ಇದರಿಂದ ದೃಶ್ಯತೆ ಹೆಚ್ಚುವುದರ ಜೊತೆಗೆ ವಿದ್ಯುತ್ ಉಳಿತಾಯವೂ ಸಾಧ್ಯವಾಗಿದೆ. ಪ್ರಯಾಣಿಕರ ಮಾಹಿತಿಗಾಗಿ ಕೋಚ್ ಇಂಡಿಕೇಷನ್ ಬೋರ್ಡ್‍ಗಳು, ರೈಲು ಇಂಡಿಕೇಷನ್ ಬೋರ್ಡ್‍ಗಳು, ಸಾರ್ವಜನಿಕ ಘೋಷಣೆ ವ್ಯವಸ್ಥೆ ಮತ್ತು ಗಡಿಯಾರಗಳು ಒದಗಿಸಲಾಗಿದೆ. ಈ ಎಲ್ಲಾ ಕಾರಣಗಳಿಂದ ಭವಿಷ್ಯದಲ್ಲಿ ಬಂಟವಾಳ ರೈಲು ನಿಲ್ದಾಣ ದಕ್ಷಿಣ ಕನ್ನಡ ಜಿಲ್ಲೆಯ ಮತ್ತೊಂದು ಪ್ರಮುಖ ನಿಲ್ದಾಣವಾಗಿ ರೂಪುಗೊಳ್ಳಲಿದೆ.

