BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

Puttur ಪುತ್ತೂರು ಪುರುಷರಕಟ್ಟೆ ಘಟನೆ ಕುರಿತು ಪೊಲೀಸ್ ಇಲಾಖೆಯ ಏಕಪಕ್ಷೀಯ ನಡೆಗೆ ವಿಹೆಚ್‌ಪಿ ಖಂಡನೆ, ಹೋರಾಟದ ಎಚ್ಚರಿಕೆ

ಪುತ್ತೂರು, ಜುಲೈ 13 :ಪುತ್ತೂರಿನ ಪುರುಷರಕಟ್ಟೆಯಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಒಬ್ಬಂಟಿ ಹಿಂದೂ ಯುವತಿಯ ಎದುರು ಆಯುಧ ಪ್ರದರ್ಶಿಸಿ ಪ್ರಾಣಭಯ ಉಂಟುಮಾಡಿದ ಘಟನೆಯನ್ನು ವಿಶ್ವ ಹಿಂದೂ ಪರಿಷತ್ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಈ ಘಟನೆಯನ್ನು ಕೇವಲ ಒಂದು 'ತಪ್ಪು ಗ್ರಹಿಕೆ' ಅಥವಾ 'ಬ್ರೆಡ್‌ಗೆ ಜಾಮ್ ಹಚ್ಚುವ ಚೂರಿ' ಎಂಬ ಬಾಲಿಶ ಕಾರಣ ನೀಡಿ ಸಲೀಸಾಗಿ ತೇಲಿಬಿಡಲು ಕೆಲವು ಹಿತಾಸಕ್ತಿಗಳು ಮತ್ತು ಸ್ಥಳೀಯ ಶಾಸಕರು ಹರಸಾಹಸ ಪಡುತ್ತಿರುವುದು ಅತ್ಯಂತ ಖೇದಕರ ಹಾಗೂ ಖಂಡನೀಯವಾಗಿದೆ. ಸಾರ್ವಜನಿಕ ರಸ್ತೆಯಲ್ಲಿ ಆಯುಧ ಹಿಡಿದು ಓಡಾಡುವುದನ್ನು ಸಾಮಾನ್ಯೀಕರಿಸಲು ಹೊರಟಿರುವ ಇವರ ನಡೆ ಸಮಾಜಕ್ಕೆ ಅತ್ಯಂತ ತಪ್ಪು ಮತ್ತು ಅಪಾಯಕಾರಿ ಸಂದೇಶವನ್ನು ರವಾನಿಸುತ್ತಿದೆ.

ಘಟನೆಯಿಂದ ತೀವ್ರ ಆತಂಕಕ್ಕೆ ಒಳಗಾಗಿರುವ ಬಾಧಿತ ಯುವತಿಯ ಮನೆಗೆ ಇಂದು ವಿಶ್ವ ಹಿಂದೂ ಪರಿಷತ್ ನಾಯಕರಾದ ಶರಣ್ ಪಂಪ್‌ವೆಲ್,ಶಿವಾನಂದ್ ಮೆಂಡನ್ ಹಾಗೂ ಪುತ್ತೂರು ಜಿಲ್ಲಾ ಪದಾಧಿಕಾರಿಗಳ ತಂಡ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದೆ. ಇಡೀ ಕುಟುಂಬ ಇಂದಿಗೂ ಆ ಘಟನೆಯ ಆಘಾತದಿಂದ ಹೊರಬಂದಿಲ್ಲ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಯುವಕನ ಕೈಯಲ್ಲಿದ್ದ ಆಯುಧ ಮತ್ತು ಆತನ ನಡವಳಿಕೆ ಆ ಯುವತಿಯಲ್ಲಿ ಸಹಜವಾಗಿಯೇ ಪ್ರಾಣಭಯವನ್ನು ಉಂಟುಮಾಡಿದೆ. ಹೀಗಿದ್ದೂ, ತನಗೆ ಭದ್ರತೆ ಬೇಕೆಂದು ಮಹಿಳಾ ಠಾಣೆಗೆ ದೂರು ನೀಡಿದ ಸಂತ್ರಸ್ತ ಯುವತಿ ಮತ್ತು ಆಕೆಯ ಕುಟುಂಬದ ಮೇಲೆ ಉಲ್ಟಾ ಕೌಂಟರ್ ಕೇಸ್ (ಪ್ರತಿ ದೂರು) ದಾಖಲಿಸಿರುವ ಪೊಲೀಸ್ ಇಲಾಖೆಯ ನಡೆ ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ. ಇದು ಕರಾವಳಿಯಲ್ಲಿ ಹೆಣ್ಣುಮಕ್ಕಳ ಧೈರ್ಯ ಹಾಗೂ ಸ್ಥೈರ್ಯವನ್ನು ಕುಗ್ಗಿಸುವ ಮತ್ತು ಕಾನೂನಿನ ಮೇಲಿರುವ ನಂಬಿಕೆಯನ್ನು ಹತ್ತಿಕ್ಕುವ ವ್ಯವಸ್ಥಿತ ಪಿತೂರಿಯಾಗಿದೆ.

ಯುವತಿ ದೂರು ನೀಡಿದಾಗ ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಬೇಕಿತ್ತು. ಯುವಕರು ಅಮಾಯಕರಾಗಿದ್ದರೆ ಕಾನೂನುಬದ್ಧವಾಗಿ ತನಿಖೆಯಲ್ಲೇ ಅದು ಸಾಬೀತಾಗುತ್ತಿತ್ತು. ಅದನ್ನು ಬಿಟ್ಟು, ಯುವಕರು ಕೇಸಿನಿಂದ ಬಚಾವಾಗಲು ಕೊಟ್ಟ ಸುಳ್ಳು ದೂರನ್ನು ಆಧರಿಸಿ, ಹೆಣ್ಣುಮಗಳ ಮೇಲೆಯೇ ಎಫ್‌ಐಆರ್ ದಾಖಲಿಸಿರುವುದು ದಕ್ಷಿಣ ಕನ್ನಡ ಜಿಲ್ಲೆಯನ್ನು ಶಾಂತಿಯ ಜಿಲ್ಲೆಯನ್ನಾಗಿ ಮಾಡುವ ಲಕ್ಷಣವಲ್ಲ. ಸಂಕಷ್ಟದಲ್ಲಿದ್ದ ಹೆಣ್ಣುಮಗಳಿಗೆ ಹಿಂದೂ ಸಂಘಟನೆಯ ಕಾರ್ಯಕರ್ತರು ನ್ಯಾಯ ಕೊಡಿಸಲು ನೆರವಾಗಿದ್ದಾರೆ. ಸಂಘಟನೆಯ ಮೇಲಿರುವ ದ್ವೇಷವನ್ನು ಒಬ್ಬಂಟಿ ಹೆಣ್ಣುಮಗಳ ಮೇಲೆ ತೀರಿಸಿಕೊಳ್ಳುತ್ತಿರುವುದು ಸರ್ಕಾರದ ರಾಜಕೀಯ ಅಸಹನೆಯ ಜ್ವಲಂತ ಉದಾಹರಣೆಯಾಗಿದೆ.

ಪೊಲೀಸ್ ಇಲಾಖೆಯು ಕೇವಲ ಕಾನೂನಿನ ಒಣ ಚೌಕಟ್ಟಿನಲ್ಲಿ ಯೋಚಿಸದೆ, ಅಬಲೆಯರ ಭೀತಿಯನ್ನು ಅರ್ಥಮಾಡಿಕೊಳ್ಳುವ ಸೂಕ್ಷ್ಮತೆಯನ್ನು ಬೆಳೆಸಿಕೊಳ್ಳಬೇಕು. ರಾಜಕೀಯ ಒತ್ತಡಕ್ಕೆ ಮಣಿಯದೆ, ನೊಂದ ಯುವತಿ ಮತ್ತು ಆಕೆಯ ಕುಟುಂಬದ ಮೇಲೆ ದಾಖಲಿಸಿರುವ ಸುಳ್ಳು ಪ್ರಕರಣವನ್ನು ತಕ್ಷಣವೇ ವಾಪಸ್ ಪಡೆಯಬೇಕು. ಈ ಅನ್ಯಾಯದ ವಿರುದ್ಧ ಈಗಾಗಲೇ ವಿಶ್ವ ಹಿಂದೂ ಪರಿಷತ್ ವತಿಯಿಂದ ಕರ್ನಾಟಕದ ರಾಜ್ಯಪಾಲರಿಗೆ, ಸಹಾಯಕ ಆಯುಕ್ತರು ಪುತ್ತೂರು ಉಪವಿಭಾಗ ಅವರ ಮುಖೇನ ಸೂಕ್ತ ನ್ಯಾಯ ಒದಗಿಸಿ ಕೊಡುವ ನಿಮಿತ ಮತ್ತು ಮಹಿಳೆಯರ ಹಕ್ಕನ್ನು ಕಸಿದು ಕೊಂಡಿರುವ ಪೊಲೀಸ್ ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ಜರುಗಿಸಬೇಕು, ಅಮಾಯಕರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಮನವಿ ನೀಡಲಾಯಿತು.

ಒಂದು ವೇಳೆ ಪೊಲೀಸರು ಈ ಕಾನೂನುಬಾಹಿರ ಕೌಂಟರ್ ಕೇಸ್ ಅನ್ನು ತಕ್ಷಣ ರದ್ದುಪಡಿಸದೆ, ಹೆಣ್ಣುಮಗಳಿಗೆ ಸೂಕ್ತ ನ್ಯಾಯ ಒದಗಿಸದಿದ್ದರೆ ವಿಶ್ವ ಹಿಂದೂ ಪರಿಷತ್  ಕಾನೂನಾತ್ಮಕ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ವಿಶ್ವ ಹಿಂದೂ ಪರಿಷತ್ ಬಲವಾಗಿ ಎಚ್ಚರಿಸುತ್ತದೆ. ಎಂದು ವಿಶ್ವ ಹಿಂದೂ ಪರಿಷತ್, ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರ ಸಹಪ್ರಮುಖ್ ಪ್ರದೀಪ್ ಸರಿಪಲ್ಲ ಪ್ರಕಟಣೆಯಲ್ಲಿ ತಿಳಿಸಿದರು.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!