ಬೆಂಗಳೂರು, ಜುಲೈ 18 :ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಪತ್ನಿ 85 ವರ್ಷದ ಚೆನ್ನಮ್ಮ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ನಾಲ್ಕು ದಿನಗಳಿಂದ ಐಸಿಯುನಲ್ಲಿ ಚೆನ್ನಮ್ಮಗೆ ಚಿಕಿತ್ಸೆ ನೀಡಲಾಗುತ್ತಿದ್ದು ಆದರೆ ಇಂದು ಸಂಜೆ 4.30ರ ಸುಮಾರಿಗೆ ಹೃದಯಾಘಾತವಾಗಿ ಕೊನೆಯುಸಿರೆಳೆದಿದ್ದಾರೆ. ಹಾಸನ ತಾಲೂಕಿನ ಮುತ್ತಿಗೆ ಹಿರೇಹಳ್ಳಿಯ ಚೆನ್ನಮ್ಮ ಅವರು 1954 ಮೇ 25ರಂದು ಹೆಚ್.ಡಿ. ದೇವೇಗೌಡರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ದಂಪತಿಗೆ 6 ಜನ ಮಕ್ಕಳಿದ್ದಾರೆ. ಸದ್ಯ ಚೆನ್ನಮ್ಮ ಅವರು ಇಹಲೋಕ ತ್ಯಜಿಸಿದ್ದು, ಪತಿ ಹೆಚ್.ಡಿ ದೇವೇಗೌಡ, ಪುತ್ರ ಹೆಚ್.ಡಿ ಕುಮಾರಸ್ವಾಮಿ, ಹೆಚ್.ಡಿ ರೇವಣ್ಣ, ಹೆಚ್.ಡಿ. ಬಾಲಕೃಷ್ಣ, ಹೆಚ್.ಡಿ. ರಮೇಶ್ ಹಾಗೂ ಮಗಳು ಹೆಚ್.ಡಿ. ಅನುಸೂಯ ಅವರನ್ನ ಅಗಲಿದ್ದಾರೆ.ಚೆನ್ನಮ್ಮ ಅವರ ನಿಧನಕ್ಕೆ ಪತಿ ಹೆಚ್.ಡಿ ದೇವೇಗೌಡ, ಪುತ್ರ ಹೆಚ್.ಡಿ ಕುಮಾರಸ್ವಾಮಿ ಸೇರಿ ಕುಟುಂಬಸ್ಥರು ಕಂಬನಿ ಮಿಡಿದಿದ್ದಾರೆ.
https://www.facebook.com/reel/1670105614061996
ಅಂದು ಸಾವು ಗೆದ್ದು ಬಂದಿದ್ದ ಚೆನ್ನಮ್ಮ..!
2001ರಲ್ಲಿ ದೇವೇಗೌಡರ ತಮ್ಮನ ಮಗನಿಂದಲೇ ಆ್ಯಸಿಡ್ ದಾಳಿಗೆ ಒಳಗಾಗಿದ್ದ ಚೆನ್ನಮ್ಮ ಅವರು ಎರಡು ಬಾರಿ ಸಾವು ಗೆದ್ದು ಬಂದಿದ್ದರು. ಆಸ್ತಿ ವಿವಾದ ಹಾಗೂ ಕುಟುಂಬದ ವೈಷಮ್ಯವೇ ಆ್ಯಸಿಡ್ ದಾಳಿಗೆ ಕಾರಣವಾಗಿತ್ತು. ದೇವೇಗೌಡರ ಸಹೋದರ ಬಸವೇಗೌಡರ ಪುತ್ರ ಲೋಕೇಶ್ ಎಂಬಾತನೇ ಈ ಕೃತ್ಯದ ಪ್ರಮುಖ ಆರೋಪಿಯಾಗಿದ್ದ. ಹೊಳೆನರಸೀಪುರ ತಾಲೂಕಿನ ಹರದನಹಳ್ಳಿಯಲ್ಲಿ ಈ ಘಟನೆ ನಡೆದಿತ್ತು. ದೈವಭಕ್ತರಾದ ದೇವೇಗೌಡರ ಕುಟುಂಬಕ್ಕೆ ಹರದನಹಳ್ಳಿಯ ದೇವೇಶ್ವರಸ್ವಾಮಿ ಮನೆದೇವರು. ದೇವೇಗೌಡರ ಕುಟುಂಬ ಪ್ರತಿ ವರ್ಷ ಶಿವರಾತ್ರಿಯಂದು ಇಲ್ಲಿ ಪೂಜೆ ಸಲ್ಲಿಸುತ್ತದೆ. ಅದರಂತೆ 2001ರ ಫೆಬ್ರವರಿ 21ರಂದು ಮನೆ ದೇವರಿಗೆ ಪೂಜೆ ಸಲ್ಲಿಸಲು ಹೋದಾಗ ಈ ಆಘಾತಕಾರಿ ಘಟನೆ ಇಡೀ ಕುಟುಂಬವನ್ನು ನಡುಗಿಸಿತ್ತು. ದೇವೇಗೌಡರು ತಮ್ಮ ಬಿಡುವಿಲ್ಲದ ಕಾರ್ಯದಲ್ಲಿ ನಿರತರಾಗಿದ್ದರಿಂದ ಚೆನ್ನಮ್ಮ ಅವರು ಪುತ್ರ ರೇವಣ್ಣ ಹಾಗೂ ಸೊಸೆ ಭವಾನಿ ರೇವಣ್ಣ ಅವರೊಂದಿಗೆ ದೇವಸ್ಥಾನಕ್ಕೆ ಬಂದಿದ್ದರು. ಪೂಜೆಯಲ್ಲಿದ್ದಾಗ ದೇವೇಗೌಡರ ಸಹೋದರ ಬಸವೇಗೌಡರ ಪುತ್ರ ಲೋಕೇಶ್ ಎಂಬಾತ ಪೂಜೆಯ ನೆಪದಲ್ಲಿ ಬಂದು ಚೆನ್ನಮ್ಮ ಅವರ ಮೇಲೆ ಆಸಿಡ್ ದಾಳಿ ನಡೆಸಿದ್ದ. ಈ ಘಟನೆಯಲ್ಲಿ ಚೆನ್ನಮ್ಮ ಅವರ ಮುಖ, ತಲೆಗೆ ಗಂಭೀರ ಗಾಯಗಳಾಗಿದ್ದರೆ, ಭವಾನಿ ರೇವಣ್ಣ ಅವರ ಕೈಗೂ ಗಾಯವಾಗಿತ್ತು. ಪ್ರಾಣಾಪಾಯದಿಂದ ಪಾರಾದ ಈ ಘಟನೆ ರಾಜಕೀಯ ಪಿತೂರಿ ಹಾಗೂ ಕೌಟುಂಬಿಕ ಕಲಹದ ಚರ್ಚೆಗೆ ಗ್ರಾಸವಾಗಿತ್ತು.
