ಬೆಳ್ತಂಗಡಿ, ಜುಲೈ 16 : ಕರಾವಳಿಯಲ್ಲಿ ಪಡಿತರ ಮೂಲಕ ಕುಚ್ಚಲು ಅಕ್ಕಿಯನ್ನು ವಿತರಿಸಲು ಒತ್ತಾಯಿಸಿ ಪಡಿತರ ಅಂಗಡಿಗಳ ಮುಂದೆ ಉಚಿತವಾಗಿ ಅಕ್ಕಿ ವಿತರಿಸುವ ಮೂಲಕ ಎಸ್‌ಡಿಪಿಐ ಪ್ರತಭಟನೆ ನಡೆಸಿದೆ.
ಸರಕಾರವು ಅನ್ನಭಾಗ್ಯ ಯೋಜನೆಯಡಿ ವಿತರಿಸುತ್ತಿರುವ ಬಿಳಿ ಅಕ್ಕಿಯ ಬದಲು ಕರಾವಳಿ ಜಿಲ್ಲೆಯ ಜನರ ಸಾಂಪ್ರದಾಯಿಕ ಆಹಾರವಾದ ಕುಚ್ಚಲು ಆಕ್ಕಿಯನ್ನು ಕರಾವಳಿಯ ಪಡಿತರ ಅಂಗಡಿಯ ಮೂಲಕ ಗ್ರಾಹಕರಿಗೆ ವಿತರಿಸಬೇಕೆಂದು ಒತ್ತಾಯಿಸಿ ''ಕರಾವಳಿಯ ತಟ್ಟೆಗೆ ಕುಚ್ಚಲು ನೀಡಿ" "ನಮ್ಮ ಆಹಾರ ನಮ್ಮ ಹಕ್ಕು" ಎಂಬ ಘೋಷನೆಯೊಂದಿಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿಯು ಕರೆ ನೀಡಿದ ಸಾಂಕೇತಿಕ ಪ್ರತಿಭಟನೆ ಅಂಗವಾಗಿ ಬೆಳ್ತಂಗಡಿ, ಬಂಟ್ವಾಳ,ಸುಳ್ಯ,ಕಡಬ ತಾಲೂಕು ವ್ಯಾಪ್ತಿಯ ಆಯ್ದ ಪಡಿತರ ಅಂಗಡಿಗಳ ಮುಂದೆ ಎಸ್‌ಡಿಪಿಐ ಕಾರ್ಯಕರ್ತರು ಗ್ರಾಹಕರಿಗೆ ಉಚಿತವಾಗಿ ಕುಚ್ಚಲು ಅಕ್ಕಿಯನ್ನು ಸಾಂಕೇತಿಕವಾಗಿ ವಿತರಿಸುವ ಮೂಲಕ ಸರಕಾರದ ಗಮನ ಸೆಳೆದರು.
ಈ ಬಗ್ಗೆ ಬೆಳ್ತಂಗಡಿ ಪಟ್ಟಣದ ಪ್ರಮುಖ ನ್ಯಾಯಬೆಲೆ ಅಂಗಡಿಯ ಮುಂದೆ ಬೆಳ್ತಂಗಡಿ ಅಸೆಂಬ್ಲಿ ಸಮಿತಿ ಅಧ್ಯಕ್ಷರಾದ ಅಕ್ಬರ್ ಬೆಳ್ತಂಗಡಿ ಯವರ ನೇತೃತ್ವದಲ್ಲಿ ಉಚಿತವಾಗಿ ಅಕ್ಕಿ ವಿತರಿಸಲಾಯಿತು. ಈ ಸಾಂಕೇತಿಕ ಪ್ರತಿಭಟನೆಯಲ್ಲಿ SDPI ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು ರವರು ಗ್ರಾಹಕರಿಗೆ ಅಕ್ಕಿ ವಿತರಿಸಿ ಮಾಧ್ಯಮದೊಂದಿಗೆ ಮಾತನಾಡಿದರು. ಸರಕಾರವು ಅನ್ನಭಾಗ್ಯ ಯೋಜನೆಯಡಿ ನೀಡುತ್ತಿರುವ ಬಿಳಿ ಅಕ್ಕಿಯು ಕರಾವಳಿ ಜನತೆಗೆ ಉಪಯೋಗಕ್ಕೆ ಶೂನ್ಯವಾಗಿದೆ. 80 ಶೇಕಡ ಗ್ರಾಹಕರು ಪಡಿತರ ಅಂಗಡಿಯಿOದ ಪಡೆದಂತ ಅಕ್ಕಿಯನ್ನು ಊಟ ಮಾಡಲು ಸಾಧ್ಯವಿಲ್ಲದೆ ಮಾರಾಟ ಮಾಡುತ್ತಿದ್ದಾರೆ. ಇಲ್ಲಿನ ಸಾಂಪ್ರದಾಯಿಕ ಆಹಾರ ಪದ್ಧತಿಯಾದ ಕುಚ್ಚಲು ಅಕ್ಕಿಯನ್ನು ಇಲ್ಲಿನ ಎಲ್ಲಾ ಜಾತಿ ಧರ್ಮದ ಜನರು ಉಪಯೋಗಿಸುತ್ತಿರುವುದು ಸರಕಾರಕ್ಕೆ ಇನ್ನೂ ಮನವರಿಕೆ ಆಗದಿರುವುದು ದುರದಷ್ಟಕರವಾಗಿದೆ ಎಂದರು. ಪ್ರತಿಯೊಂದು ವಿಚಾರದಲ್ಲಿಯೂ ಕರಾವಳಿ ಜಿಲ್ಲೆಯನ್ನು ಕಡೆಗಣಿಸುತ್ತಿರುವ ರಾಜ್ಯ ಸರ್ಕಾರ ಇಲ್ಲಿನ ಜನರ ಸ್ವಾಭಿಮಾನ ಮತ್ತು ಗೌರವದ ಬದುಕಿಗೆ ಮನ್ನಣೆ ನೀಡುತ್ತಿಲ್ಲ. ಜಿಲ್ಲೆಯ ಜನಪ್ರತಿನಿಧಿಗಳು ಜನರ ನೈಜ ಸಮಸ್ಯೆಗಳನ್ನು ಪರಿಹರಿಸಿ ಅವರಿಗೆ ನ್ಯಾಯ ದೊರಕಿಸಿ ಕೊಡುವುದನ್ನು ಬಿಟ್ಟು ದ್ವೇಷ ಭಾಷಣ ಹಾಗೂ ಕೋಮು ವಿಚಾರಗಳ ಬಗ್ಗೆ ಅನಗತ್ಯವಾದ ಗೊಂದಲಗಳನ್ನ ಉಂಟುಮಾಡುವುದರಲ್ಲಿ ಬ್ಯುಸಿ ಆಗಿದ್ದಾರೆ. ಜಿಲ್ಲೆಯ ಜನರ ದೈನಂದಿನ ಸಮಸ್ಯೆಗಳ ಬಗ್ಗೆ ಧ್ವನಿಯೆತ್ತುವ ಬದಲು ಕಂಬಳ, ಕೋಳಿ ಅಂಕ ಮುಂತಾದ ವಿಚಾರಗಳಲ್ಲಿ ಹೆಚ್ಚಿನ ಆಸಕ್ತಿ ವಹಿಸುತ್ತಿದ್ದಾರೆ. ಇದು ಸ್ವಾಭಿಮಾನಿಗಳಾದ ದಕ್ಷಿಣ ಕನ್ನಡ ಜಿಲ್ಲೆಯ ಹಾಗೂ ಕರಾವಳಿಯ ಜನತೆಗೆ ಜನಪ್ರತಿನಿಧಿಗಳು ಹಾಗೂ ಸರಕಾರ ಮಾಡುತ್ತಿರುವ ಮಹಾ ವಂಚನೆಯಾಗಿದೆ . ಇದರ ವಿರುದ್ಧ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ನಿರಂತರವಾಗಿ ಬೀದಿಹೋರಾಟಗಳನ್ನು ಸಂಘಟಿಸುತ್ತಿದೆ. ಇವತ್ತು ಸಾಂಕೇತಿಕವಾಗಿ ಕುಚ್ಚಲು ಅಕ್ಕಿಯನ್ನು ಗ್ರಾಹಕರಿಗೆ ವಿತರಿಸುವ ಮೂಲಕ ಸರಕಾರದ ಕಣ್ಣು ತೆರೆಸುವ ಪ್ರಯತ್ನಕ್ಕೆ ಎಸ್‌ಡಿಪಿಐ ಮುಂದಾಗಿದೆ. ಇದು ಆರಂಭ ಮಾತ್ರ, ಸರಕಾರ ಮತ್ತು ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು ತನ್ನ ಅಸಡ್ಡೆಯನ್ನು ಇದೇ ರೀತಿ ಮುಂದುವರಿಸಿದರೆ ಮುಂದಿನ ದಿನಗಳಲ್ಲಿ ಅವರ ಮನೆಯ ಮುಂದೆ ಕುಳಿತುಕೊಂಡು ವಿನೂತನ ರೀತಿಯ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಿದ್ದೇವೆ ಎಂದು ಈ ಸಂದರ್ಭದಲ್ಲಿ ಅನ್ವರ್ ಸಾದತ್ ಎಚ್ಚರಿಸಿದ್ದಾರೆ.
ಬೆಳ್ತಂಗಡಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ತಲಪಾಡಿ , ಅಸೆಂಬ್ಲಿ ಸಮಿತಿಯ ಜೊತೆ ಕಾರ್ಯದರ್ಶಿ ರಶೀದ್ ಬೆಳ್ತಂಗಡಿ, ಕ್ಷೇತ್ರ ಕೋಶಾಧಿಕಾರಿ ಸಾಲಿಹ್ ಮದ್ದಡ್ಕ ಹಾಗೂ ಪಕ್ಷದ ಸ್ಥಳೀಯ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.