BREAKING
ದಕ್ಷಿಣ ಕನ್ನಡ

Bantwal murder ಬಿಸಿರೋಡಿನಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಯುವತಿ ಮೇಲೆ ಮಾರಕಾಸ್ತ್ರಗಳಿಂದ ದಾಳಿ, ಯುವತಿ ಮೃತ್ಯು- ಪರಾರಿಯಾಗಿದ್ದ ಆರೋಪಿ ಗುರುತು ಪತ್ತೆ..!


ಬಂಟ್ವಾಳ, ಜುಲೈ 16:ಬಸ್‌ಗಾಗಿ ಕಾಯುತ್ತಿದ್ದ ಯುವತಿ ಮೇಲೆ ಯುವಕನೋರ್ವ ತಲವಾರಿನಿಂದ ದಾಳಿ ಮಾಡಿ ಹತ್ಯೆ ಮಾಡಿದ ಭೀಕರ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ ಬಿಸಿ ರೋಡ್ ಕೆ ಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಗುರುವಾರ ಸಂಜೆ ನಡೆದಿದೆ. 

ಬಂಟ್ವಾಳ ತಾಲೂಕಿನ ಕಕ್ಯಪದವು ನಿವಾಸಿ ಲಾವಣ್ಯ(25) ಬರ್ಬರವಾಗಿ ಹತ್ಯೆಯಾದ ಯುವತಿಯಾಗಿದ್ದಾಳೆ. ಹತ್ಯೆ ಬಳಿಕ ಆರೋಪಿ ಪರಾರಿಯಾಗಿದ್ದ,  ಆತನ ಗುರುತು ಪತ್ತೆಯಾಗಿದ್ದು ಚೇತನ್‌ ಎಂದು ಗುರುತಿಸಿದ್ದಾರೆ. ದೂರ ಸಂಬಂಧಿಯಾದ ಆರೋಪಿ ಚೇತನ್‌, ಲಾವಣ್ಯ ಅವರನ್ನು ಪ್ರೀತಿಸುತ್ತಿದ್ದುಇದು ಆಕೆಗೆ ಇಷ್ಟವಿರಲಿಲ್ಲ ಎನ್ನಲಾಗಿದೆ.  

ಮಾಹಿತಿ ಪ್ರಕಾರ ಕಲ್ಲಡ್ಕದ ಖಾಸಗಿ ನರ್ಸಿಂಗ್ ಹೋಂನಲ್ಲಿ ಕೆಲಸ ಮಾಡುತ್ತಿದ್ದ ಕಕ್ಯಪದವು ಮೈರ ನಿವಾಸಿ ಬಾಳಪ್ಪ ಗೌಡ ಎಂಬವರ ಪುತ್ರಿ ಲಾವಣ್ಯ ಅಲ್ಲಿಂದ ಬಿ.ಸಿ.ರೋಡಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬಂದು ಅಲ್ಲಿಂದ ಬಿ.ಸಿ.ರೋಡ್ ಕಕ್ಯಪದವು ಕೆಎಸ್‌ಆರ್‌ಟಿಸಿ ಬಸ್ ಹತ್ತಿ ಕುಳಿತಿದ್ದಾರೆ. ಈ ಸಂದರ್ಭದಲ್ಲಿ ಆರೋಪಿ ಯುವಕ ಅಲ್ಲಿಗೆ ಬಂದಿದ್ದಾನೆ. ಆತನನ್ನು ಕಂಡು ಹೆದರಿದ ಯುವತಿ ಬಸ್ಸಿನಿಂದ ಕೆಳಕ್ಕೆ ಇಳಿದು ಆತನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾಳೆ. ಯುವತಿಯ  ಬೆನ್ನಟ್ಟಿದ್ದ ಯುವಕ ತನ್ನ ಬ್ಯಾಗ್‌ನಿಂದ ತಲವಾರು ತೆಗೆದು ಆಕೆಯ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಿ ಬಳಿಕ ಪರಾರಿಯಾಗಿದ್ದಾನೆ. 

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸಹಿತ ಹಿರಿಯ ಪೋಲಿಸ್ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದು ಪರಾರಿಯಾಗಿದ್ದ ಆರೋಪಿಯ ಬಂಧನಕ್ಕೆ ವಿಶೇಷ ಪೊಲೀಸ್ ತಂಡಗಳನ್ನು ರಚಿಸಿದ್ದಾರೆ.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!