ಮಂಗಳೂರು, ಜುಲೈ 17: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಬಿಸಿರೋಡಿನಲ್ಲಿ ಶುಕ್ರವಾರ ಹಾಡಹಗಲೇ ನಡೆದ ಯುವತಿ ಲಾವಣ್ಯ ಕೊಲೆ ಪ್ರಕರಣ ಆರೋಪಿ ಚೇತನ್ ನನ್ನು ಮಂಗಳೂರಿನಲ್ಲಿ ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ. ಬೆಳ್ತಂಗಡಿಯ ಒಡಿಲ್ನಾಳ ನಿವಾಸಿಯಾಗಿರುವ ಚೇತನ್ ನನ್ನು ಶುಕ್ರವಾರ ಮಂಗಳೂರು ಹೊರವಲಯದ ಪಚ್ಚನಾಡಿ ಬಳಿಯಿಂದ ಬಂಧಿಸಲಾಗಿದೆ. ತನ್ನ ಕಾರಿನ ಪಕ್ಕದಲ್ಲಿ ಕುಳಿತಿದ್ದಾಗ ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಬಂಧಿಸಲಾಯಿತು. ಘಟನೆಯ ನಂತರ ಆತ ವಿಷ (ಇಲಿ ಪಾಷಾಣ) ಸೇವಿಸಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಾಹಿತಿ ನೀಡಿದ್ದಾರೆ, ಆತನನ್ನು ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನೆಯ ನಂತರ, ಆರೋಪಿಯನ್ನು ಪತ್ತೆಹಚ್ಚಲು ಬಂಟ್ವಾಳ ನಗರ ಪೊಲೀಸರು ಎರಡು ವಿಶೇಷ ತಂಡಗಳನ್ನು ರಚಿಸಿದ್ದರು. ಬಳಿಕ ಆತನನ್ನು ಮಂಗಳೂರಿನ ಪಚ್ಚನಾಡಿಯಲ್ಲಿ ಬಂಧಿಸಲಾಯಿತು. ಈ ಸಂಬಂಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS)2023ರ ಸೆಕ್ಷನ್ 78, 103 ಮತ್ತು 106ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಕಲ್ಲಡ್ಕದ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಲಾವಣ್ಯ ಅವರನ್ನು ಚೇತನ್ ಗುರುವಾರ ಸಂಜೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದನು. ಸಂತ್ರಸ್ತೆಯ ದೂರದ ಸಂಬಂಧಿಯಾಗಿದ್ದ ಚೇತನ್ ಆಕೆಯನ್ನು ಪ್ರೀತಿಸುತ್ತಿದ್ದನು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಚೇತನ್ ಬಂಧನದ ಬಗ್ಗೆ ದ.ಕ ಎಸ್ ಪಿ ಅವರು ಮಾಹಿತಿ ನೀಡಿದ್ದಾರೆ.
