ಅಯೋಧ್ಯೆ, ಜುಲೈ 10 : ಹಿಂದುಗಳ ಅತ್ಯಂತ ಪವಿತ್ರ ಧಾರ್ಮಿಕ ಕೇತ್ರಗಳಲ್ಲಿ ಒಂದಾದ ಅಯೋಧ್ಯೆ ಶ್ರೀರಾಮ ಮಂದಿರದ ಹುಂಡಿ ಹಣ ಕಳ್ಳತನ ಪ್ರಕರಣದಲ್ಲಿ ನಾಲ್ವರು ಆರೋಪಿಗಳು ಮೂರು ಕೋಟಿ ರೂಪಾಯಿ ಎಗರಿಸಿರುವುದನ್ನು ತನಿಖೆಯಲ್ಲಿ ಒಪ್ಪಿಕೊಂಡಿದ್ದಾರೆ.
ಆರಂಭದಲ್ಲಿ ಸ್ವಲ್ಪ ಸ್ವಲ್ಪ ಹಣ ಕದ್ದಿದ್ದ ಆರೋಪಿಗಳು, ಬಳಿಕ ಕೋಟಿ ಕೋಟಿ ರೂಪಾಯಿ ಹಣ ಎಗರಿಸಿದ್ದಾರೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ನ್ಯಾಯಾಲಯದ ಅನುಮತಿ ಮೇರೆಗೆ ಜೈಲಿನಲ್ಲೇ ಆರೋಪಿಗಳಾದ ಅನುಕಲ್ಪ್ ಮಿಶ್ರಾ, ಲವಕುಶ ಮಿಶ್ರಾ ಮತ್ತು ಕರುಣೇಶ್ ಪಾಂಡೆಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಇದಕ್ಕೂ ಮೊದಲು ಆರೋಪಿ ಅವಿನಾಶ್ ಶುಕ್ಲಾ ಕೂಡ ತಪ್ಪೊಪ್ಪಿಕೊಂಡಿದ್ದ. ವಿಚಾರಣೆ ವೇಳೆ ನಾಲ್ವರೂ ಸೇರಿ ಹುಂಡಿ ಹಣ ಕಳ್ಳತನದ ಸಂಪೂರ್ಣ ಮಾಹಿತಿ ನೀಡಿರುವುದಾಗಿ ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಟಿನ್ನು ಯಾದವ್ ಮತ್ತು ಮೇಲ್ವಿಚಾರಣೆಯಲ್ಲಿದ್ದ ಸುಭಾಷ್ ಶ್ರೀವಾಸ್ತವ್ ಸಹಕಾರದಿಂದ ಕಳ್ಳತನ ನಡೆಯುತ್ತಿತ್ತು. ಟಿನ್ನು ಯಾದವ್ ಬಳಿ ಹುಂಡಿ ಎಣಿಕೆ ಕೇಂದ್ರದ ಕೀ ಇದ್ದ ಕಾರಣ ಹಣ ಕಳವು ಮಾಡುವುದು ಸುಲಭವಾಗುತ್ತಿತ್ತು ಎನ್ನಲಾಗಿದೆ.
ಕದ್ದ ಹಣದ ಮೂಲ ಪತ್ತೆಯಾಗದಂತೆ ಮಾಡಲು ಆರೋಪಿಗಳು ಬೇರೆ ಪ್ಲ್ಯಾನ್ ಮಾಡಿದ್ದರು. ಹಣವನ್ನು ತಮ್ಮ ಸ್ನೇಹಿತರು ಮತ್ತು ಸಂಬಂಧಿಕರಿಗೆ ನೀಡಿ, ಬಳಿಕ ವಿವಿಧ ಬ್ಯಾಂಕ್ ಖಾತೆಗಳ ಮೂಲಕ ವರ್ಗಾವಣೆ ಮಾಡುತ್ತಿದ್ದರು. ಹಣದ ಮೂಲವನ್ನು ಮರೆಮಾಚಲು ಈ ವ್ಯವಸ್ಥಿತ ಸಂಚು ರೂಪಿಸಲಾಗಿತ್ತು ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ. ಪ್ರಕರಣದ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿರುವ ಪೊಲೀಸರು ಆರೋಪಿಗಳ ಕುಟುಂಬಸ್ಥರು ಹಾಗೂ ಸ್ನೇಹಿತರ ಸುಮಾರು 30 ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿದ್ದಾರೆ.
ಭಕ್ತರಿಗೆ ನಕಲಿ ರಶೀದಿ ನೀಡಿ ಹಣ ವಸೂಲಿ ದಂಧೆ
ತನಿಖೆ ವೇಳೆ ಮತ್ತೊಂದು ಶಾಕಿಂಗ್ ಮಾಹಿತಿ ಹೊರಬಿದ್ದಿದ್ದು ದೇಣಿಗೆ ನೀಡಲು ಬಂದ ಭಕ್ತರಿಗೆ ನಕಲಿ ರಶೀದಿ ನೀಡಿ ಅಲ್ಲಿಂದಲೂ ಹಣ ವಸೂಲಿ ಮಾಡಲಾಗುತ್ತಿತ್ತು. ಈ ಮಾಹಿತಿಯನ್ನು ಸ್ವತಃ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಈ ಸಂಬಂಧ ನಕಲಿ ರಶೀದಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
