ಕಾರವಾರ, ನ.13: ದಾವಣಗೆರೆಯಿಂದ ಮಂಗಳೂರಿಗೆ ಸಾಗಿಸುತ್ತಿದ್ದ ₹1.15 ಕೋಟಿ ಹಣವನ್ನು ದರೋಡೆ ನಡೆಸಲು ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿಯಾಗಿರುವ ಕಾರವಾರದ ಪೊಲೀಸ್ ಕಾನ್ಸ್ಟೇಬಲ್ ಒಬ್ಬರನ್ನು ಮಂಗಳೂರಿನ ಉರ್ವ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕಾರವಾರ ಟ್ರಾಫಿಕ್ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಶ್ರೀಶೈಲ್ ಬಂಧಿತ ಆರೋಪಿ. ದರೋಡೆ ಮತ್ತು ಅಪಹರಣ ಪ್ರಕರಣದಲ್ಲಿ ಬಂಧನಕ್ಕೊಳಗಾದ ಹಿನ್ನೆಲೆಯಲ್ಲಿ, ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ರೀಶೈಲ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಪ್ರಕರಣದ ಹಿನ್ನೆಲೆ:
ಸತ್ಯನಾರಾಯಣ ಎಂಬವರು ದಾವಣಗೆರೆಯಿಂದ ಮಂಗಳೂರಿಗೆ ₹1.15 ಕೋಟಿ ನಗದು ಹಣವನ್ನು ಬಸ್ಸಿನಲ್ಲಿ ತರುತ್ತಿದ್ದ ಬಗ್ಗೆ ಕಾನ್ಸ್ಟೇಬಲ್ ಶ್ರೀಶೈಲ್ ಖಚಿತ ಮಾಹಿತಿ ಪಡೆದಿದ್ದನು. ಬಳಿಕ ಯುವಕರ ತಂಡವೊಂದನ್ನು ಕಟ್ಟಿಕೊಂಡು ಪೊಲೀಸರ ಸೋಗಿನಲ್ಲಿ ತೆರಳಿ ಹಣವನ್ನು ದೋಚಿದ್ದನು ಎಂದು ಆರೋಪಿಸಲಾಗಿದೆ. ಈ ಕುರಿತು ಸತ್ಯನಾರಾಯಣ ನೀಡಿದ ದೂರಿನ ಮೇರೆಗೆ ಉರ್ವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.
ಐವರ ಬಂಧನ, ಪ್ರಧಾನ ಆರೋಪಿಗಾಗಿ ಶೋಧ:
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಉಡುಪಿ ಜಿಲ್ಲೆಯ ಕಾಪು ನಿವಾಸಿ ಅಝೀಝ್, ಹಳಿಯಾಳದ ನಸ್ರುಲ್ಲಾಖಾನ್, ಕಾರವಾರದ ನಿತ್ಯಾನಂದ ಹಾಗೂ ಖಾಲಿದ್ ಎಂಬುವವರನ್ನು ಬಂಧಿಸಿದ್ದರು. ತನಿಖೆಯ ವೇಳೆ ಕಾನ್ಸ್ಟೇಬಲ್ ಶ್ರೀಶೈಲ್, ಕಾರವಾರ ತಾಲೂಕಿನ ಕಿನ್ನರ ಗ್ರಾಮದ ಗಣೇಶ ಕೊಳಂಕರ್ ಎಂಬ ಯುವಕನನ್ನು ಈ ಕೃತ್ಯಕ್ಕೆ ಬಳಸಿಕೊಂಡಿರುವುದು ಬೆಳಕಿಗೆ ಬಂದಿದೆ. ಪ್ರಕರಣದ ಪ್ರಧಾನ ಆರೋಪಿಯಾಗಿರುವ ಗಣೇಶ ಕೊಳಂಕರ್ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕಾಗಿ ಮಂಗಳೂರು ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.