BREAKING
[ಹೋಮ್] ಕರ್ನಾಟಕ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ಮರ್ಡರ್

Bengaluru ನಿಶ್ಚಿತಾರ್ಥವಾದ ಕೇವಲ ಮೂರೇ ದಿನಕ್ಕೆ ಭಾವಿ ಪತಿಯನ್ನೇ ಸುಪಾರಿ ಕೊಟ್ಟು ಕೊಲ್ಲಿಸಿದ್ದ ಪ್ರಕರಣ; ಒಂದೇ ದಿನದ 73 ಫೋನ್ ಕರೆಗಳು ರಹಸ್ಯ ಬಯಲು ಮಾಡಿದ ರೋಚಕ ಕಥೆ..!


ಬೆಂಗಳೂರು: ಅದು 2003ರ ನವೆಂಬರ್ 30. ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್ ಬಿ.ವಿ. ಗಿರೀಶ್ (27) ಮತ್ತು ಕಾನೂನು ವಿದ್ಯಾರ್ಥಿನಿ ಶುಭಾ ಶಂಕರನಾರಾಯಣನ್ (21) ಅವರ ನಿಶ್ಚಿತಾರ್ಥ ಅದ್ಧೂರಿಯಾಗಿ ನೆರವೇರಿತ್ತು. ಆದರೆ, ಭವಿಷ್ಯದ ಬಗ್ಗೆ ನೂರಾರು ಕನಸು ಕಂಡಿದ್ದ ಗಿರೀಶ್, ತಾನು ಪ್ರೀತಿಯಿಂದ ವರಿಸಬೇಕಿದ್ದ ಹುಡುಗಿಯ ಸಂಚಿಗೇ ಬಲಿಯಾಗುತ್ತೇನೆ ಎಂದು ಕನಸಲ್ಲೂ ಎಣಿಸಿರಲಿಲ್ಲ.

ವಿಮಾನ ನೋಡುವ ನೆಪದಲ್ಲಿ ಕರೆದೊಯ್ದು ಹತ್ಯೆ:

ನಿಶ್ಚಿತಾರ್ಥವಾದ ಕೇವಲ ಮೂರು ದಿನಗಳ ಬಳಿಕ (ಡಿಸೆಂಬರ್ 3, 2003), ಮದುವೆಗೆ ಮುನ್ನ ಒಟ್ಟಿಗೆ ಸಮಯ ಕಳೆಯೋಣ ಎಂದು ಶುಭಾ ಗಿರೀಶ್‌ಗೆ ಕರೆ ಮಾಡಿದ್ದಳು. ರಾತ್ರಿ ಊಟದ ಬಳಿಕ ಎಚ್‌ಎಎಲ್ (HAL) ವಿಮಾನ ನಿಲ್ದಾಣದ ಸಮೀಪದ ಇನ್ನರ್ ರಿಂಗ್ ರೋಡ್‌ನಲ್ಲಿ ನಿಂತು ವಿಮಾನಗಳು ಟೇಕ್-ಆಫ್ ಆಗುವುದನ್ನು ನೋಡೋಣ ಎಂದು ಆಕೆ ಕರೆದೊಯ್ದಿದ್ದಳು.


ಗಿರೀಶ್ ರನ್‌ವೇ ಕಡೆಗೆ ನೋಡುತ್ತಾ ನಿಂತಿದ್ದಾಗ, ಹಿಂದಿನಿಂದ ಬಂದ ಮೂವರು ದುಷ್ಕರ್ಮಿಗಳು ಬೈಕ್‌ನ ಶಾಕ್ ಅಬ್ಸಾರ್ಬರ್‌ನಿಂದ (Shock Absorber) ಗಿರೀಶ್ ತಲೆಗೆ ಭೀಕರವಾಗಿ ಹಲ್ಲೆ ನಡೆಸಿದ್ದರು. ಪಕ್ಕದಲ್ಲೇ ನಿಂತಿದ್ದ ಶುಭಾ ಏನೂ ತಿಳಿಯದವಳಂತೆ ಕಿರುಚಾಡಿ, ಗಾಬರಿಯಾದಂತೆ ನಾಟಕವಾಡಿದ್ದಳು. ಗಂಭೀರವಾಗಿ ಗಾಯಗೊಂಡಿದ್ದ ಗಿರೀಶ್ ಮರುದಿನ ಬೆಳಿಗ್ಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ತನಿಖೆಗೆ ದಿಕ್ಕು ತೋರಿಸಿದ 'ನಿಶ್ಚಿತಾರ್ಥದ ವೀಡಿಯೋ' ಮತ್ತು '73 ಫೋನ್ ಕರೆಗಳು':

ಪ್ರಕರಣ ದಾಖಲಿಸಿಕೊಂಡ ಪೊಲೀಸರಿಗೆ ಆರಂಭದಲ್ಲಿ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಗಿರೀಶ್‌ಗೆ ಯಾರೊಂದಿಗೂ ದ್ವೇಷವಿರಲಿಲ್ಲ. ನಿಶ್ಚಿತಾರ್ಥವಾಗಿ ಮೂರೇ ದಿನವಾಗಿದ್ದರಿಂದ ಶುಭಾ ಮೇಲೆ ಯಾರಿಗೂ ಅನುಮಾನ ಬಂದಿರಲಿಲ್ಲ.


ಆದರೆ, ಪೊಲೀಸರು ನಿಶ್ಚಿತಾರ್ಥದ ವೀಡಿಯೋವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅನುಮಾನದ ಕಿಡಿ ಹೊತ್ತಿಕೊಂಡಿತು. ವೀಡಿಯೋದುದ್ದಕ್ಕೂ ಶುಭಾ ಮುಖದಲ್ಲಿ ಯಾವುದೇ ಸಂತೋಷವಿರಲಿಲ್ಲ, ಆಕೆ ನಿರಾಸಕ್ತಿಯಿಂದ ಇದ್ದದ್ದು ಸ್ಪಷ್ಟವಾಗಿತ್ತು. ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು, ಆ ಕಾಲಕ್ಕೆ ಭಾರತದಲ್ಲಿ ಹೊಸದಾಗಿದ್ದ 'ಕಾಲ್ ಡೀಟೇಲ್ ರೆಕಾರ್ಡ್ಸ್' (CDR) ತಂತ್ರಜ್ಞಾನವನ್ನು ಬಳಸಿದರು. ಆಗ ಬೆಳಕಿಗೆ ಬಂದಿದ್ದೇ ಆಘಾತಕಾರಿ ಸತ್ಯ!


ಹತ್ಯೆ ನಡೆದ ಒಂದೇ ದಿನದಲ್ಲಿ ಶುಭಾ ತನ್ನ ಕಾಲೇಜು ಜೂನಿಯರ್ ಹಾಗೂ ಪ್ರಿಯಕರ ಅರುಣ್ ವರ್ಮಾ (19) ಎಂಬಾತನಿಗೆ ಬರೋಬ್ಬರಿ 73 ಬಾರಿ ಕರೆ ಮಾಡಿ, ಹಲವು ಮೆಸೇಜ್‌ಗಳನ್ನು ಕಳುಹಿಸಿದ್ದಳು. ಪೊಲೀಸರು ಈ ಸಾಕ್ಷ್ಯಗಳನ್ನು ಮುಂದಿಟ್ಟು ವಿಚಾರಣೆ ನಡೆಸಿದಾಗ ಶುಭಾ ತಪ್ಪೊಪ್ಪಿಕೊಂಡಿದ್ದಳು.


ಮದುವೆಗೂ ಮೊದಲೇ ನಡೆದಿತ್ತು ಕೊಲೆ ಸಂಚು:

ತನ್ನ ಪ್ರಿಯಕರ ಅರುಣ್ ವರ್ಮಾ ಜೊತೆಗಿನ ಸಂಬಂಧಕ್ಕೆ ತಂದೆ ವಿರೋಧ ವ್ಯಕ್ತಪಡಿಸಿ ಗಿರೀಶ್ ಜೊತೆ ನಿಶ್ಚಿತಾರ್ಥ ಮಾಡಿಸಿದ್ದರು. ಹೀಗಾಗಿ, ನಿಶ್ಚಿತಾರ್ಥಕ್ಕೂ ಮೊದಲೇ ಅರುಣ್ ವರ್ಮಾ ಹಾಗೂ ಇಬ್ಬರು ಸುಪಾರಿ ಹಂತಕರೊಂದಿಗೆ ಸೇರಿ ಗಿರೀಶ್‌ನನ್ನು ಮುಗಿಸಲು ಶುಭಾ ಸಂಚು ರೂಪಿಸಿದ್ದಳು.


ಜೀವಾವಧಿ ಶಿಕ್ಷೆ ಎತ್ತಿಹಿಡಿದ ಸುಪ್ರೀಂ ಕೋರ್ಟ್:

ಸುದೀರ್ಘ ವಿಚಾರಣೆಯ ಬಳಿಕ 2010ರ ಜುಲೈನಲ್ಲಿ ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಕರ್ನಾಟಕ ಹೈಕೋರ್ಟ್ ಕೂಡ ಈ ತೀರ್ಪನ್ನು ಎತ್ತಿಹಿಡಿದಿತ್ತು. 2025ರಲ್ಲಿ ಸುಪ್ರೀಂ ಕೋರ್ಟ್ ಸಹ ನಾಲ್ವರ ಜೀವಾವಧಿ ಶಿಕ್ಷೆಯನ್ನು ಕಾಯಂಗೊಳಿಸಿ ಮಹತ್ವದ ತೀರ್ಪು ನೀಡಿದೆ. "ತನ್ನ ವೈಯಕ್ತಿಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಶುಭಾ ಅತ್ಯಂತ ದುರಂತಮಯ ಮತ್ತು ಸ್ವೀಕಾರಾರ್ಹವಲ್ಲದ ದಾರಿಯನ್ನು ಆರಿಸಿಕೊಂಡಳು, ಇದರಿಂದ ಅಮಾಯಕ ಯುವಕನೊಬ್ಬನ ಪ್ರಾಣ ಹೋಯಿತು" ಎಂದು ಸುಪ್ರೀಂ ಕೋರ್ಟ್ ತೀಕ್ಷ್ಣವಾಗಿ ಅಭಿಪ್ರಾಯಪಟ್ಟಿದೆ.


ಶುಭಾ, ಅರುಣ್ ವರ್ಮಾ ಕ್ಷಮಾದಾನ ಅರ್ಜಿ ತಿರಸ್ಕರಿಸಿದ ರಾಜ್ಯ ಸಚಿವ ಸಂಪುಟ.!

ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಬಿ.ವಿ. ಗಿರೀಶ್ ಹತ್ಯೆ ಪ್ರಕರಣದ ಪ್ರಮುಖ ಅಪರಾಧಿಗಳಾದ ಶುಭಾ ಶಂಕರನಾರಾಯಣನ್ ಹಾಗೂ ಆಕೆಯ ಪ್ರಿಯಕರ ಅರುಣ್ ವರ್ಮಾ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಜ್ಯ ಸಚಿವ ಸಂಪುಟವು  ತಿರಸ್ಕರಿಸಿದೆ . ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಅಪರಾಧಿಗಳು ಶಿಕ್ಷೆಯಿಂದ ವಿನಾಯಿತಿ ಹಾಗೂ ಕ್ಷಮಾದಾನ ಕೋರಿ ರಾಜ್ಯಪಾಲರ ಮುಂದೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗಳ ಕುರಿತು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ನಡೆಸಲಾಗಿತ್ತು. ಅಪರಾಧದ ಗಂಭೀರತೆಯನ್ನು ಪರಿಗಣಿಸಿದ ಸಚಿವ ಸಂಪುಟ, ಅಂತಿಮವಾಗಿ ಇಬ್ಬರ ಕ್ಷಮಾದಾನ ಅರ್ಜಿಗಳನ್ನು ತಿರಸ್ಕರಿಸಲು ನಿರ್ಧರಿಸಿತ್ತು.





📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!