BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

WIM ಅಂಗನವಾಡಿ ಕಾರ್ಯಕರ್ತೆಯರಿಗೆ ಎರಡು ತಿಂಗಳ ವೇತನ ಪಾವತಿಸದ ಸರ್ಕಾರದ ನಿರ್ಲಕ್ಷ್ಯ ಖಂಡನೀಯ,ಮಾಸಿಕ ಕನಿಷ್ಠ ವೇತನ 25,000 ನೀಡಲು ಆಗ್ರಹ: ವಿಮೆನ್ ಇಂಡಿಯಾ ಮೂವ್‌ಮೆಂಟ್

ಮಂಗಳೂರು,ಅ.02 : ಅಂಗನವಾಡಿ ಕಾರ್ಯಕರ್ತೆಯರಿಗೆ ಕಳೆದ ಎರಡು ತಿಂಗಳಿಂದ ವೇತನ ಪಾವತಿಸದೆ ಸರ್ಕಾರ ನಿರ್ಲಕ್ಷ್ಯ ವಹಿಸಿರುವುದನ್ನು ವಿಮೆನ್ ಇಂಡಿಯಾ ಮೂವ್‌ಮೆಂಟ್ (WIM) ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷೆ ಶಿನಿರಾ ಬಂಟ್ವಾಳ ತೀವ್ರವಾಗಿ ಖಂಡಿಸಿದ್ದಾರೆ.

ಕಾಲಕಾಲಕ್ಕೆ ಸರಿಯಾಗಿ ವೇತನ ಪಾವತಿಸಲು ಸಾಧ್ಯವಾಗದಿದ್ದರೆ, ಸರ್ಕಾರ ಇವರಿಂದ ಕೆಲಸ ಮಾಡಿಸಿಕೊಳ್ಳುತ್ತಿರುವುದಾದರೂ ಏಕೆ ಎಂದು ಅವರು ಪ್ರಶ್ನಿಸಿದ್ದಾರೆ. ಸೇವೆಯ ಹೆಸರಿನಲ್ಲಿ ಅಲ್ಪ ಪ್ರಮಾಣದ ಗೌರವಧನ ನೀಡಿ, ಸರ್ಕಾರದ ತಳಮಟ್ಟದ ಸಮೀಕ್ಷೆಗಳು ಸೇರಿದಂತೆ ವಿವಿಧ ಕಾರ್ಯಗಳಿಗೆ ಅಂಗನವಾಡಿ ಕಾರ್ಯಕರ್ತೆಯರನ್ನು ಬಳಸಿಕೊಳ್ಳುತ್ತಿರುವುದು ಅತ್ಯಂತ ಅಕ್ಷಮ್ಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ಎರಡು ತಿಂಗಳಿಂದ ವೇತನವಿಲ್ಲದೆ ಕಾರ್ಯಕರ್ತೆಯರು ತಮ್ಮ ದಿನನಿತ್ಯದ ಜೀವನ ಹಾಗೂ ಕುಟುಂಬ ನಿರ್ವಹಣೆಯನ್ನು ಹೇಗೆ ನಡೆಸುವುದು ಎಂಬ ಆತಂಕದಲ್ಲಿ ಪರದಾಡುವಂತಾಗಿದೆ. ಇತ್ತೀಚಿನ ದಿನಗಳಲ್ಲಿ ಅಂಗನವಾಡಿ ಕರ್ತವ್ಯದ ಜೊತೆಗೆ S.I.R. ಎನ್ಯೂಮರೇಷನ್ ಫಾರಂ ವಿತರಣೆ, ವಾಪಸ್ ಪಡೆಯುವುದು, ನೋಟಿಸ್ ನೀಡುವುದು ಸೇರಿದಂತೆ ಮನೆ-ಮನೆ ಭೇಟಿ, ವಿವಿಧ ಇಲಾಖೆಗಳ ಸಮೀಕ್ಷೆಗಳು ಹಾಗೂ ಸರ್ಕಾರದ ಹಲವು ಯೋಜನೆಗಳ ಮೇಲ್ವಿಚಾರಣೆಯಂತಹ ಹೆಚ್ಚುವರಿ ಕೆಲಸಗಳಿಗೆ ಇವರನ್ನು ನಿಯೋಜಿಸಲಾಗುತ್ತಿದೆ.

ನಿರಂತರವಾಗಿ ಇತರೆ ಇಲಾಖೆಗಳ ಕೆಲಸಗಳಿಗೂ ಅಂಗನವಾಡಿ ಕಾರ್ಯಕರ್ತೆಯರನ್ನು ಬಳಸಿಕೊಳ್ಳುತ್ತಿರುವುದರಿಂದ ಅಂಗನವಾಡಿ ಕೇಂದ್ರಗಳ ಮೂಲ ಉದ್ದೇಶ ಹಾಗೂ ಕಾರ್ಯನಿರ್ವಹಣೆಗೆ ತೊಂದರೆಯಾಗುತ್ತಿದೆ. ಸರ್ಕಾರದ ಇಂತಹ ಅವೈಜ್ಞಾನಿಕ ಧೋರಣೆಗಳಿಂದ ಪೋಷಕರು ತಮ್ಮ ಮಕ್ಕಳನ್ನು ಅಂಗನವಾಡಿ ಕೇಂದ್ರಗಳಿಗೆ ಕಳುಹಿಸುವ ವಿಚಾರದಲ್ಲಿ ಗೊಂದಲ ಹಾಗೂ ಹಿಂಜರಿಕೆಗೆ ಒಳಗಾಗುವ ಸಾಧ್ಯತೆ ಇದೆ . 

ಆದ್ದರಿಂದ, ಸರ್ಕಾರದ ಇತರೆ ಇಲಾಖೆಗಳ ಕೆಲಸಗಳಿಗೆ ಅಂಗನವಾಡಿ ಕಾರ್ಯಕರ್ತೆಯರನ್ನು ಬಳಸಿಕೊಳ್ಳುವುದನ್ನು ನಿಲ್ಲಿಸಿ, ಅಂತಹ ಕಾರ್ಯಗಳಿಗಾಗಿ ಪ್ರತ್ಯೇಕ ವ್ಯವಸ್ಥೆ ಹಾಗೂ ಅಗತ್ಯ ಸಿಬ್ಬಂದಿಯನ್ನು ನೇಮಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಮಹಿಳೆಯರೇ ಆಗಿರುವ ಈ ಕಾರ್ಯಕರ್ತೆಯರಿಗೂ ಸಣ್ಣಪುಟ್ಟ ಮಕ್ಕಳಿದ್ದು, ಅವರ ಲಾಲನೆ-ಪಾಲನೆ, ಅನಾರೋಗ್ಯದ ವೆಚ್ಚ ಸೇರಿದಂತೆ ಕುಟುಂಬದ ಸಂಪೂರ್ಣ ಜವಾಬ್ದಾರಿಯನ್ನು ನಿರ್ವಹಿಸುವುದು ಈಗಾಗಲೇ ಕಷ್ಟಕರವಾಗಿದೆ. 

ಕಳೆದ ಬಾರಿಯೂ ಇದೇ ರೀತಿ ಎರಡು ತಿಂಗಳ ವೇತನ ಪಾವತಿಯಾಗದೆ ವಿಳಂಬವಾದ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಅನಿವಾರ್ಯವಾಗಿ ಪ್ರತಿಭಟನೆ ನಡೆಸಿದ ಬಳಿಕವಷ್ಟೇ ಸರ್ಕಾರ ವೇತನ ಪಾವತಿಸಿತ್ತು. ಈ ಬಾರಿಯೂ ಅದೇ ಪರಿಸ್ಥಿತಿ ಮರುಕಳಿಸಿರುವುದು ಸರ್ಕಾರದ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ. ಪ್ರತಿಬಾರಿಯೂ ಹಗಲಿರುಳು ದುಡಿಯುವ ಬಡ ಕಾರ್ಮಿಕ ಮಹಿಳೆಯರು ತಮ್ಮ ಹಕ್ಕಿನ ವೇತನವನ್ನು ಪಡೆಯಲು ಕೂಡ ಬೀದಿಗಿಳಿದು ಹೋರಾಟ ನಡೆಸಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿರುವುದು ಸರ್ಕಾರದ ಹೊಣೆಗೇಡಿತನದ ಪರಮಾವಧಿಯಾಗಿದೆ. 

ಆದ್ದರಿಂದ, ಬಡ ಮಹಿಳೆಯರ ಬದುಕಿನೊಂದಿಗೆ ಚೆಲ್ಲಾಟವಾಡುವುದನ್ನು ನಿಲ್ಲಿಸಿ, ಅಂಗನವಾಡಿ ಕಾರ್ಯಕರ್ತೆಯರ ಬಹುದಿನಗಳ ಬೇಡಿಕೆಯಂತೆ ಅವರ ಗೌರವಧನವನ್ನು ಕನಿಷ್ಠ ರೂ.25,000ಕ್ಕೆ ಏರಿಕೆ ಮಾಡಬೇಕು. ಜೊತೆಗೆ, ತಕ್ಷಣವೇ ಬಾಕಿ ಇರುವ ಎರಡು ತಿಂಗಳ ಸಂಪೂರ್ಣ ವೇತನವನ್ನು ಬಿಡುಗಡೆ ಮಾಡಬೇಕು ಎಂದು ವಿಮೆನ್ ಇಂಡಿಯಾ ಮೂವ್‌ಮೆಂಟ್ (WIM) ಸರ್ಕಾರವನ್ನು ತೀವ್ರವಾಗಿ ಆಗ್ರಹಿಸಿದೆ.

ಒಂದು ವೇಳೆ ಸರ್ಕಾರವು ತನ್ನ ನಿರ್ಲಕ್ಷ್ಯವನ್ನು ಮುಂದುವರಿಸಿದರೆ, ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಶಿನಿರಾ ಬಂಟ್ವಾಳ ಎಚ್ಚರಿಸಿದ್ದಾರೆ.


ದೈನಂದಿನ ಸುದ್ದಿಗಾಗಿ  ಲಿಂಕ್ ಕ್ಲಿಕ್ ಮಾಡಿ ಗ್ರೂಪ್ ಜಾಯಿನ್ ಆಗಿ..

https://chat.whatsapp.com/J5GjMrDnaLNAuyGxzPdyNe




📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!