BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ವಿದೇಶ

Real Hero ಫ್ಲೈದುಬೈ ವಿಮಾನದಲ್ಲಿ ಹೈಡ್ರಾಮಾ: ‘ಏರ್ ಕ್ರ್ಯಾಶ್’ ವಿಕ್ಷಣೆಯಿಂದ ಬಂತು ಜ್ಞಾನ, 180 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು..!




ಟೆಲ್ ಅವಿವ್, ಅ.01 : ಯುನೈಟೆಡ್ ಅರಬ್ ಎಮಿರೇಟ್ಸ್‌ನಿಂದ ಇಸ್ರೇಲ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಸಂಭವಿಸಿದ ಭೀಕರ ತುರ್ತು ಪರಿಸ್ಥಿತಿಯೊಂದರಲ್ಲಿ, ಟಿವಿ ಕಾರ್ಯಕ್ರಮವೊಂದರಿಂದ ಪಡೆದ ಜ್ಞಾನವನ್ನು ಬಳಸಿದ ಪ್ರಯಾಣಿಕರೊಬ್ಬರು ವಿಮಾನವನ್ನು ದುರಂತದಿಂದ ಪಾರು ಮಾಡಿರುವ ರೋಚಕ ಘಟನೆ ಬೆಳಕಿಗೆ ಬಂದಿದೆ.

ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳ ಪೈಕಿ ಒಬ್ಬರು ಮತ್ತೊಬ್ಬರಿಗೆ ಚಾಕುವಿನಿಂದ ಇರಿದ ಬಳಿಕ ವಿಮಾನವು ಹಠಾತ್ತನೆ ಕೆಳಮುಖವಾಗಿ ಚಲಿಸತೊಡಗಿತ್ತು. ಕೇವಲ ಒಂದು ನಿಮಿಷದಲ್ಲಿ ವಿಮಾನವು ತನ್ನ ಹಾರಾಟದ ಎತ್ತರದ ಅರ್ಧದಷ್ಟು ಭಾಗವನ್ನು ಕಳೆದುಕೊಂಡಿತ್ತು. ಈ ಸಂದರ್ಭದಲ್ಲಿ ಕಾಕ್‌ಪಿಟ್‌ಗೆ ನುಗ್ಗಿದ ಪ್ರಯಾಣಿಕರು ಹಾಗೂ ಸಿಬ್ಬಂದಿ ಆರೋಪಿಯನ್ನು ಹತೋಟಿಗೆ ತೆಗೆದುಕೊಂಡು, ವಿಮಾನವನ್ನು ಸೌದಿ ಅರೇಬಿಯಾದಲ್ಲಿ ಸುರಕ್ಷಿತವಾಗಿ ಭೂಸ್ಪರ್ಶ ಮಾಡುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ನಡೆದಿದ್ದೇನು?

ಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪ್ರಯಾಣಿಕ ಯಾನೀವ್ ಹಯೂನ್ ಅವರನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬುಧವಾರ ಟೆಲ್ ಅವಿವ್ ವಿಮಾನ ನಿಲ್ದಾಣದಲ್ಲಿ ಭೇಟಿಯಾಗಿ ಅಭಿನಂದಿಸಿದರು.

ಕ್ಯಾಪ್ಟನ್ ಸ್ಮಿತ್ ಮಚ್ಚರ್ ಎಂಬ ಪೈಲಟ್‌ಗೆ ಚಾಕುವಿನಿಂದ ಇರಿದ ನಂತರ ತಾನು ಹಾಗೂ ಇತರ ಪ್ರಯಾಣಿಕರು ಕಾಕ್‌ಪಿಟ್‌ಗೆ ಬಲವಂತವಾಗಿ ಪ್ರವೇದಿಸಲು ಯತ್ನಿಸಿದ್ದಾಗಿ ಹಯೂನ್ ವಿವರಿಸಿದ್ದಾರೆ. ಗಾಯಗೊಂಡ ಪೈಲಟ್ ಬಾಗಿಲಿಗೆ ಬಿದ್ದಿದ್ದರಿಂದ ಒಳಗೆ ಹೋಗಲು ಕಷ್ಟವಾಗಿತ್ತು. ಒಳಗೆ ಪ್ರವೇಶಿಸಿದಾಗ ಆಸನಗಳಲ್ಲಿ ಯಾವುದೇ ಪೈಲಟ್‌‌ಗಳಿರಲಿಲ್ಲ; ಒಬ್ಬರು ನೆಲದ ಮೇಲಿದ್ದರೆ, ಮತ್ತೊಬ್ಬರು ನಿಯಂತ್ರಣ ಫಲಕದ ಬಳಿ ಇದ್ದರು. ದಾಳಿಕೋರ ವಿಮಾನವನ್ನು ನಿಷ್ಕ್ರಿಯಗೊಳಿಸಲು ಯತ್ನಿಸುತ್ತಿದ್ದ ಎಂದು ಹಯೂನ್ ತಿಳಿಸಿದ್ದಾರೆ.

‘ಏರ್ ಕ್ರ್ಯಾಶ್ ಇನ್ವೆಸ್ಟಿಗೇಷನ್’ ಕೈಹಿಡಿದ ಜ್ಞಾನ

ವಿಮಾನವನ್ನು ತಕ್ಷಣ ನಿಯಂತ್ರಣಕ್ಕೆ ತರಲು ಹ್ಯಾಂಡಲ್‌ಗಳನ್ನು ಹಿಂದಕ್ಕೆ ಎಳೆಯಬೇಕೆಂಬ ಜ್ಞಾನ ತನಗೆ ಹೇಗೆ ಬಂತು ಎಂಬುದನ್ನು ವಿವರಿಸುತ್ತಾ ಹಯೂನ್, "ನಾನು ಟಿವಿಯಲ್ಲಿ 'ಏರ್ ಕ್ರ್ಯಾಶ್ ಇನ್ವೆಸ್ಟಿಗೇಷನ್' ಕಾರ್ಯಕ್ರಮವನ್ನು ನಿಯಮಿತವಾಗಿ ವೀಕ್ಷಿಸುತ್ತೇನೆ. ತುರ್ತು ಸಂದರ್ಭಗಳಲ್ಲಿ ವಿಮಾನದ ನಿಯಂತ್ರಣ ಹೇಗೆ ಮರಳಿ ಪಡೆಯಬೇಕೆಂಬುದರ ಅರಿವು ಅಲ್ಲಿಂದಲೇ ನನಗೆ ಸಿಕ್ಕಿತು" ಎಂದು ಅಚ್ಚರಿಯ ಸಂಗತಿ ಹಂಚಿಕೊಂಡಿದ್ದಾರೆ. ಇಸ್ರೇಲ್ ವಾಯುಪ್ರದೇಶವನ್ನು ಪ್ರವೇಶಿಸಿದ್ದರೆ ಪರಿಸ್ಥಿತಿ ದುರಂತದಲ್ಲಿ ಅಂತ್ಯಗೊಳ್ಳುತ್ತಿತ್ತು ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಧಾನಿ ನೆತನ್ಯಾಹು ಭೇಟಿ ಮತ್ತು ಶ್ಲಾಘನೆ

ಪ್ರಧಾನಿ ನೆತನ್ಯಾಹು ಅವರನ್ನು ಭೇಟಿಯಾದ ಸಂದರ್ಭದಲ್ಲಿ ಹಯೂನ್ ಅವರ ಬಟ್ಟೆಗಳಲ್ಲಿ ರಕ್ತದ ಕಲೆಗಳು ಹಾಗೆಯೇ ಇದ್ದವು. ರಕ್ತದ ಕಲೆಗಳಿಗಾಗಿ ಅವರು ಕ್ಷಮೆ ಯಾಚಿಸಿದಾಗ, ನೆತನ್ಯಾಹು ಅದನ್ನು ಲೆಕ್ಕಿಸದೆ ಅವರನ್ನು ತಬ್ಬಿಕೊಂಡು ಶ್ಲಾಘಿಸಿದರು.

"ನಿಮ್ಮನ್ನು ನೋಡಿದಾಗ ನನಗೆ ಸಿಂಹವೊಂದು ಕಾಣುತ್ತದೆ. ನೀವು ಒಬ್ಬ ಮಹಾನ್ ವೀರರು. ನಿಮ್ಮ ಈ ಕೆಲಸ ನಂಬಲಸಾಧ್ಯವಾದುದು. ನೀವು ವಿಮಾನದ ಪ್ರಯಾಣಿಕರನ್ನು ಮಾತ್ರವಲ್ಲದೆ, ಇನ್ನೂ ಅನೇಕರ ಪ್ರಾಣವನ್ನೇ ಉಳಿಸಿದ್ದೀರಿ" ಎಂದು ನೆತನ್ಯಾಹು ಪ್ರಶಂಸಿಸಿದರು.

ಆರೋಪಿತ ದಾಳಿಯ ಹಿಂದಿನ ನಿಖರ ಉದ್ದೇಶ ಇನ್ನು ಸ್ಪಷ್ಟವಾಗಿಲ್ಲ. ಗಾಝಾ ಯುದ್ಧಕ್ಕೆ ಕಾರಣವಾದ 2023ರ ಅಕ್ಟೋಬರ್ 7ರ ಹಮಾಸ್ ದಾಳಿಯ ಮೂರನೇ ವರ್ಷಾಚರಣೆಗೆ ಕೆಲವೇ ದಿನಗಳ ಮೊದಲು ಈ ಘಟನೆ ನಡೆದಿದೆ. ಸೌದಿ ಅರೇಬಿಯಾ ದಾಳಿಕೋರನ ವಿರುದ್ಧ ಯಾವ ಕ್ರಮ ಕೈಗೊಳ್ಳಲಿದೆ ಎಂಬ ಪ್ರಶ್ನೆಗಳು ಎದುರಾಗಿವೆ. ಮತ್ತೊಂದೆಡೆ, ತನಿಖೆ ಪೂರ್ಣಗೊಳ್ಳುವವರೆಗೆ ಇಸ್ರೇಲ್‌‌ಗೆ ಮತ್ತು ಅಲ್ಲಿಂದ ಬರುವ ವಿಮಾನಯಾನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಫ್ಲೈದುಬೈ ತಿಳಿಸಿದೆ.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!