ಪಾಲಕ್ಕಾಡ್, ಅ.01: ಸ್ವತಂತ್ರ ಜೀವನ ಹಾಗೂ ಮಾಡೆಲಿಂಗ್ ಕ್ಷೇತ್ರಕ್ಕೆ ತೆರಳುವ ತಮ್ಮ ಆಸೆಗೆ ಮಕ್ಕಳ ಉಪಸ್ಥಿತಿಯೇ ಅಡ್ಡಿಯಾಗಿದೆ ಎಂಬ ವಿಕೃತ ಮನೋಭಾವದಿಂದ ತಾಯಿಯೊಬ್ಬಳೇ ತನ್ನಿಬ್ಬರು ಕಂದಮ್ಮಗಳನ್ನು ನೀರಿನಲ್ಲಿ ಮುಳುಗಿಸಿ ಬರ್ಬರವಾಗಿ ಹತ್ಯೆ ಮಾಡಿರುವ ದಾರುಣ ಘಟನೆ ಕೇರಳದ ಪಾಲಕ್ಕಾಡ್‌ನಲ್ಲಿ ವರದಿಯಾಗಿದೆ.
ಮೃತರನ್ನು ಜಾನ್ ಕುಮಾರ್ ಮತ್ತು ನಿವೇದ್ಯ ದಂಪತಿಯ ಮಕ್ಕಳಾದ ಜೆನ್ನಿಫರ್ ಜೂಲಿಯೆಟ್ (5) ಹಾಗೂ ರಾಬಿನ್ ಕ್ರಿಸ್ಟೋಫರ್ (3) ಎಂದು ಗುರುತಿಸಲಾಗಿದೆ.
ನಡೆದಿದ್ದೇನು?
ಮರ ಕಡಿಯುವ ಕೆಲಸ ಮಾಡುತ್ತಿದ್ದ ಜಾನ್ ಕುಮಾರ್ ಹಾಗೂ ಅವರ ಕುಟುಂಬ ಎರಡು ತಿಂಗಳ ಹಿಂದಷ್ಟೇ ಕೂರಂಕಡಿಗೆ ಸ್ಥಳಾಂತರಗೊಂಡಿತ್ತು. ಮಂಗಳವಾರ ಬೆಳಗ್ಗೆ ಜಾನ್ ಕುಮಾರ್ ಕೆಲಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಮನೆಯಲ್ಲಿ ನಿವೇದ್ಯ ಹಾಗೂ ಇಬ್ಬರು ಮಕ್ಕಳು ಮಾತ್ರ ಇದ್ದರು.
ಮನೆಯ ಮುಂಭಾಗದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ ಹಲವು ದಿನಗಳಿಂದ ಮಕ್ಕಳ ಧ್ವನಿ ಕೇಳಿಸದ ಕಾರಣ ಅನುಮಾನಗೊಂಡು ಆಸುಪಾಸಿನಲ್ಲಿ ವಿಚಾರಿಸಿದ್ದಾರೆ. ಬಳಿಕ ಹಿಂಭಾಗದ ಸ್ನಾನಗೃಹದಲ್ಲಿ ಪರಿಶೀಲಿಸಿದಾಗ ಇಬ್ಬರೂ ಮಕ್ಕಳು ನೀರಿನ ಟಬ್‌ನಲ್ಲಿ ನಿಶ್ಚಲವಾಗಿ ಬಿದ್ದಿರುವುದು ಬೆಳಕಿಗೆ ಬಂದಿದೆ. ಆರಂಭದಲ್ಲಿ ಮಕ್ಕಳು ನೀರಿನ ಟ್ಯಾಂಕ್‌ನಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ನಿವೇದ್ಯ ಅವರ ತಾಯಿ ಹೇಳಿಕೆ ನೀಡಿದ್ದರು. ಆದರೆ, ತೀವ್ರ ತನಿಖೆ ನಡೆಸಿದ ಪೊಲೀಸರ ಮುಂದೆ ತಾನೇ ಮಕ್ಕಳನ್ನು ಮುಳುಗಿಸಿ ಕೊಂದಿರುವುದಾಗಿ ನಿವೇದ್ಯ ಒಪ್ಪಿಕೊಂಡಿದ್ದಾಳೆ.
ಹತ್ಯೆಗೆ ಕಾರಣವೇನು?
ಮಕ್ಕಳ ಉಪಸ್ಥಿತಿ ತನ್ನ ಸ್ವತಂತ್ರ ಜೀವನ ಹಾಗೂ ಮಾಡೆಲಿಂಗ್ ಕ್ಷೇತ್ರಕ್ಕೆ ತೆರಳುವ ಆಸೆಗೆ ಅಡ್ಡಿಯಾಗುತ್ತಿದೆ. ತಾನು ಕೂಡ ಕಲಿಯುವ ಆಸೆ ಹೊಂದಿದ್ದರೂ ಮಕ್ಕಳ ಆರೈಕೆಯಿಂದಾಗಿ ಅದು ಸಾಧ್ಯವಾಗುತ್ತಿರಲಿಲ್ಲ ಎಂದು ನಿವೇದ್ಯ ಪೊಲೀಸರ ವಿಚಾರಣೆಯಲ್ಲಿ ತಿಳಿಸಿದ್ದಾಳೆ. ಅಲ್ಲದೆ, ತನ್ನ ಪತಿ ಹಾಗೂ ಮಕ್ಕಳ ಕುರಿತು ಕೆಲವರು ವದಂತಿಗಳನ್ನು ಹರಡುತ್ತಿದ್ದರು, ಮಕ್ಕಳು ತನ್ನವರಲ್ಲ ಎಂಬ ಮಾತುಗಳೂ ಕೇಳಿಬರುತ್ತಿದ್ದವು ಎಂದಿರುವ ಆಕೆ, ಮಕ್ಕಳನ್ನು ಕೊಂದ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೆ ಎಂದು ಬಾಯಬಿಟ್ಟಿದ್ದಾಳೆ.
ದಂಪತಿ ನಡುವೆ ನಿತ್ಯ ಕಲಹ
ಮನೆಯಲ್ಲಿ ದಂಪತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ನಿವೇದ್ಯ ಅತಿಯಾಗಿ ಮೊಬೈಲ್ ಬಳಸುತ್ತಿದ್ದುದಕ್ಕೆ ಜಾನ್ ಕುಮಾರ್ ಆಕ್ಷೇಪ ವ್ಯಕ್ತಪಡಿಸುತ್ತಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಘಟನೆಗೆ ಬೇರೆ ಯಾವುದೇ ಆಳವಾದ ಕಾರಣಗಳಿವೆಯೇ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ನಿವೇದ್ಯ ಅವರ ಮೊಬೈಲ್ ಫೋನ್ ವಶಕ್ಕೆ ಪಡೆದು ತೀವ್ರ ತನಿಖೆ ಮುಂದುವರಿಸಿದ್ದಾರೆ.
