ಕಡಬ, ಸೆ 23: ಮಧ್ಯಾಹ್ನ ಮನೆಯಲ್ಲಿ ಊಟ ಮಾಡಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಹಠಾತ್ ಯುವಕನೋರ್ವ ಹೃದಯಾಘಾತದಿಂದ ಸಾವನ್ನಪ್ಪಿದ್ದ ಘಟನೆ ದಕ್ಷಿಣ ಕನ್ನಡದ ಕಡಬ ರಾಮಕುಂಜ ಗ್ರಾಮದಲ್ಲಿ ಸಂಭವಿಸಿದೆ. ಕಾಜರುಕ್ಕು ನಿವಾಸಿ, ಸಚಿನ್(33) ಮೃತಪಟ್ಟ ಯುವಕನಾಗಿದ್ದಾನೆ. ಸಚಿನ್ ಮಂಗಳವಾರ ಮಧ್ಯಾಹ್ನ ಮನೆಯಲ್ಲಿ ಊಟ ಮಾಡಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಹಠಾತ್ ಸಂಭವಿಸಿದ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಕಾಜರುಕ್ಕು ದಿ. ವಿಶ್ವನಾಥ ಪೂಜಾರಿ ಅವರ ಪುತ್ರರಾದ ಸಚಿನ್ ಅವರು ಬೈಕ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದರು.
ಹಿಂದೆ ಕಾಜರುಕ್ಕು ಎಂಬಲ್ಲಿ ಸ್ವಂತ ಬೈಕ್ ಸರ್ವೀಸ್ ಸ್ಟೇಷನ್ ನಡೆಸುತ್ತಿದ್ದ ಸಚಿನ್, ಬಳಿಕ ಅದನ್ನು ಬಿಟ್ಟು ಕಳೆದ ಒಂದೂವರೆ ವರ್ಷದಿಂದ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ (KCDC) ಮಂಗಳೂರು ವಿಭಾಗದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಅರಣ್ಯ ವೀಕ್ಷಕರಾಗಿ (Forest Watcher) ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದರು.
ಸೆಪ್ಟೆಂಬರ್ 22 ರಂದು ಎಂದಿನಂತೆ ಕರ್ತವ್ಯದಲ್ಲಿದ್ದ ಅವರು, ಮಧ್ಯಾಹ್ನ ಸುಮಾರು 1:30 ರ ವೇಳೆಗೆ ಮನೆಗೆ ಊಟಕ್ಕೆ ಬಂದಿದ್ದರು. ಊಟ ಮುಗಿಸಿದ ಬಳಿಕ ಕೊಠಡಿಯಲ್ಲಿ ವಿಶ್ರಾಂತಿಗಾಗಿ ಮಲಗಿದ್ದರು. ಮಧ್ಯಾಹ್ನ ಸುಮಾರು 3:00 ಗಂಟೆಯ ವೇಳೆಗೆ ತಾಯಿ ಸಚಿನ್ ಅವರನ್ನು ಎಬ್ಬಿಸಲು ಹೋದಾಗ, ಅವರು ಕಷ್ಟಪಟ್ಟು ಉಸಿರಾಡುತ್ತಿರುವುದು ಕಂಡುಬಂದಿದೆ. ಗಾಬರಿಗೊಂಡ ತಾಯಿ ತಕ್ಷಣವೇ ಮತ್ತೊಬ್ಬ ಮಗ ಚರಣ್ ಅವರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ಚರಣ್ ಅವರು ಸಚಿನ್ ಸ್ಥಿತಿ ಗಂಭೀರತೆ ಅರಿತು ತಕ್ಷಣವೇ ಸಮೀಪದ ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಆದರೆ, ಮಧ್ಯಾಹ್ನ 3:10 ರ ವೇಳೆಗೆ ಆಸ್ಪತ್ರೆಗೆ ತಲುಪಿದಾಗ, ಸಚಿನ್ ಅವರು ಮಾರ್ಗಮಧ್ಯೆಯೇ ಮೃತಪಟ್ಟಿರುವುದಾಗಿ ವೈದ್ಯಾಧಿಕಾರಿಗಳು ದೃಢಪಡಿಸಿದರು.
ಘಟನೆಯ ಬಳಿಕ ಮೃತದೇಹವನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಸಚಿನ್ ಅವರ ಸಾವಿನಲ್ಲಿ ಯಾವುದೇ ಸಂಶಯವಿರುವುದಿಲ್ಲ ಎಂದು ಮೃತರ ಅಣ್ಣ ಚರಣ್ ನೀಡಿದ ದೂರಿನ ಮೇರೆಗೆ ಕಡಬ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದೆ.
ಕೇವಲ 33 ವರ್ಷದ ಕ್ರಿಯಾಶೀಲ ಯುವಕನ ಅಕಾಲಿಕ ನಿಧನಕ್ಕೆ ರಾಮಕುಂಜ ಹಾಗೂ ಕಾಜರುಕ್ಕು ಪರಿಸರದಲ್ಲಿ ತೀವ್ರ ಶೋಕ ವ್ಯಕ್ತವಾಗಿದೆ. ಮೃತರು ತಾಯಿ, ಓರ್ವ ಸಹೋದರ ಹಾಗೂ ಓರ್ವ ಸಹೋದರಿಯನ್ನು ಅಗಲಿದ್ದಾರೆ.