ಮಂಗಳೂರು, ಸೆಪ್ಟೆಂಬರ್ 04 : ಬಂಗಾರಪೇಟೆಯ ಭೋವಿನಗರದಲ್ಲಿ 6 ವರ್ಷದ ಪುಟ್ಟ ಬಾಲಕಿಯ ಮೇಲೆ ನಡೆದಿರುವುದಾಗಿ ಆರೋಪಿಸಲಾಗಿರುವ ಲೈಂಗಿಕ ದೌರ್ಜನ್ಯವನ್ನು ವಿಮೆನ್ ಇಂಡಿಯಾ ಮೂವ್ಮೆಂಟ್ ತೀವ್ರವಾಗಿ ಖಂಡಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ವಿಮ್ ರಾಜ್ಯ ಪ್ರಧಾನ ಕಾರ್ಯದರ್ಶಿ ನಸ್ರಿಯಾ ಬೆಳ್ಳಾರೆ, ಕೋಲಾರದ ಘಟನೆ ಅತ್ಯಂತ ಖಂಡನೀಯ ಹಾಗೂ ಮನಕಲಕುವಂತಹದ್ದು. ಸಮಾಜವೇ ತಲೆತಗ್ಗಿಸುವಂತಹ ಇಂತಹ ಕೃತ್ಯಗಳಿಗೆ ಯಾವುದೇ ಕಾರಣಕ್ಕೂ ಕ್ಷಮೆ ನೀಡಬಾರದೆಂದು ಹೇಳಿದರು .
ಮಾತನಾಡಲು, ತನ್ನ ನೋವನ್ನು ಸಂಪೂರ್ಣವಾಗಿ ವ್ಯಕ್ತಪಡಿಸಲು ಸಾಧ್ಯವಾಗದ ವಯಸ್ಸಿನ ಮಗುವಿನ ಮೇಲೆ ಇಂತಹ ದೌರ್ಜನ್ಯ ನಡೆದಿರುವುದು ಅತ್ಯಂತ ಆತಂಕಕಾರಿ. ಈ ಪ್ರಕರಣದಲ್ಲಿ ಸತ್ಯಾಸತ್ಯತೆ ಸಂಪೂರ್ಣ ತನಿಖೆಯಿಂದ ಹೊರಬರಬೇಕು. ತಪ್ಪಿತಸ್ಥರು ಯಾರೇ ಆಗಿರಲಿ, ಅವರ ಸ್ಥಾನಮಾನ, ರಾಜಕೀಯ ಸಂಪರ್ಕ, ಸಾಮಾಜಿಕ ಪ್ರಭಾವ ಅಥವಾ ಯಾವುದೇ ರೀತಿಯ ಹಿನ್ನೆಲೆಯನ್ನು ಪರಿಗಣಿಸದೆ ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು.
ಸಂತ್ರಸ್ತ ಬಾಲಕಿಯ ಕುಟುಂಬ ಬಡ ಮತ್ತು ದುರ್ಬಲ ಸ್ಥಿತಿಯಲ್ಲಿರುವುದರಿಂದ, ಅವರ ಅಸಹಾಯಕತೆಯನ್ನು ಯಾರೂ ದುರುಪಯೋಗಪಡಿಸಿಕೊಳ್ಳದಂತೆ ಸರ್ಕಾರ ಮತ್ತು ಪೊಲೀಸ್ ಇಲಾಖೆ ವಿಶೇಷ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ನ್ಯಾಯ ಎನ್ನುವುದು ಪ್ರಭಾವಿಗಳ ಹಕ್ಕು ಮಾತ್ರವಲ್ಲ; ಅದು ಪ್ರತಿಯೊಬ್ಬ ನಾಗರಿಕನ ಹಕ್ಕು.
ಈ ಪ್ರಕರಣವನ್ನು ಮುಚ್ಚಿಹಾಕಲು ಅಥವಾ ದುರ್ಬಲಗೊಳಿಸಲು ಯಾರಾದರೂ ಪ್ರಯತ್ನಿಸಿದ್ದರೆ, ಅಂತಹ ಪ್ರಯತ್ನಗಳ ಬಗ್ಗೆಯೂ ಪ್ರತ್ಯೇಕವಾಗಿ ತನಿಖೆ ನಡೆಸಬೇಕು. ಪ್ರಕರಣದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿದ್ದಾರೆ ಎಂಬ ಆರೋಪಗಳಿದ್ದು ಅವುಗಳನ್ನೂ ಗಂಭೀರವಾಗಿ ಪರಿಶೀಲಿಸಿ ಸತ್ಯವನ್ನು ಬಹಿರಂಗಪಡಿಸಬೇಕು .
ಪ್ರಕರಣದ ನಿಷ್ಪಕ್ಷಪಾತ ಮತ್ತು ಸಮಗ್ರ ತನಿಖೆ ನಡೆಸಿ ವೈದ್ಯಕೀಯ ಮತ್ತು ಫಾರೆನ್ಸಿಕ್ ಸಾಕ್ಷ್ಯಗಳನ್ನು ಸುರಕ್ಷಿತವಾಗಿ ಸಂರಕ್ಷಿಸಬೇಕು.
FIR ಹಾಗೂ ತನಿಖೆಯ ಪ್ರಗತಿಯನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಪರಿಶೀಲಿಸಬೇಕು.
ಸಂತ್ರಸ್ತ ಬಾಲಕಿ ಮತ್ತು ಕುಟುಂಬಕ್ಕೆ ಸಂಪೂರ್ಣ ಭದ್ರತೆ ಒದಗಿಸಬೇಕು.ಕುಟುಂಬಕ್ಕೆ ಅಗತ್ಯ ವೈದ್ಯಕೀಯ, ಮಾನಸಿಕ ಹಾಗೂ ಕಾನೂನು ನೆರವು ನೀಡಬೇಕು.
POCSO ಕಾಯ್ದೆಯಡಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತ್ವರಿತ ನ್ಯಾಯ ಒದಗಿಸಬೇಕು .
ತನಿಖೆಯಲ್ಲಿ ಯಾವುದೇ ಲೋಪ ಅಥವಾ ಕರ್ತವ್ಯಲೋಪ ಕಂಡುಬಂದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೂ ಕ್ರಮ ಕೈಗೊಳ್ಳಬೇಕು.
ಮಕ್ಕಳ ಸುರಕ್ಷತೆಯಲ್ಲಿ ಯಾವುದೇ ರಾಜಿ ಸಲ್ಲದು.
ಸಂತ್ರಸ್ತ ಕುಟುಂಬದ ಧ್ವನಿಯನ್ನು ಮೌನಗೊಳಿಸುವ ಯಾವುದೇ ಪ್ರಯತ್ನವನ್ನು ಸಮಾಜ ಒಪ್ಪಿಕೊಳ್ಳಬಾರದು. ಮಾಧ್ಯಮಗಳು, ನಾಗರಿಕ ಸಮಾಜ, ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಸಂಘಟನೆಗಳು ಜವಾಬ್ದಾರಿಯುತವಾಗಿ ಈ ಪ್ರಕರಣದ ನ್ಯಾಯಸಮ್ಮತ ತನಿಖೆಗೆ ಧ್ವನಿ ಎತ್ತಬೇಕು.
ಸರ್ಕಾರ ಮತ್ತು ಪೊಲೀಸ್ ಇಲಾಖೆ ಯಾವುದೇ ಒತ್ತಡಕ್ಕೆ ಮಣಿಯದೆ, ಸತ್ಯವನ್ನು ಹೊರತಂದು, ಸಂತ್ರಸ್ತ ಬಾಲಕಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ತಕ್ಷಣ ಮತ್ತು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.