ಮಂಗಳೂರು, ಸೆ. 25: ಬಂಟ್ವಾಳದಲ್ಲಿ ಕಳೆದ ವರ್ಷ ನಡೆದಿದ್ದ ಅಬ್ದುಲ್ ರೆಹಮಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರ್ಎಸ್ಎಸ್ ಹಿರಿಯ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ಪೊಲೀಸ್ ಇಲಾಖೆಯಿಂದ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ. ಈ ಬೆಳವಣಿಗೆಯು ಕರಾವಳಿಯಲ್ಲಿ ರಾಜಕೀಯ ಹಾಗೂ ಸಾಮಾಜಿಕ ಸಂಚಲನಕ್ಕೆ ಕಾರಣವಾಗಿದ್ದು, ಪೊಲೀಸ್ ಇಲಾಖೆಯ ಈ ಕ್ರಮದ ವಿರುದ್ಧ ವಿಶ್ವ ಹಿಂದೂ ಪರಿಷತ್ (VHP) ಮತ್ತು ಬಜರಂಗದಳ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ನೋಟಿಸ್ ನೀಡಿರುವುದನ್ನು ಖಂಡಿಸಿರುವ ವಿಹೆಚ್ಪಿ ಮುಖಂಡ ಶರಣ್ ಪಂಪ್‌ವೆಲ್ ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. "ಅಬ್ದುಲ್ ರೆಹಮಾನ್ ಹತ್ಯೆಗೂ ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೂ ಏನು ಸಂಬಂಧ? ಕಾಂಗ್ರೆಸ್ ಸರ್ಕಾರ ರಾಜಕೀಯ ಪ್ರೇರಿತವಾಗಿ ಹಿಂದೂ ಸಂಘಟನೆಯನ್ನು ಟಾರ್ಗೆಟ್ ಮಾಡುತ್ತಿದೆ. ಎಸ್ಪಿಯವರು ಈ ಕೇಸ್‌ನಲ್ಲಿ ಅವರನ್ನು ಸಿಲುಕಿಸಲು ಪ್ರಯತ್ನಿಸಿದರೆ ಹಿಂದೂ ಸಂಘಟನೆಗಳು ರಸ್ತೆಗಿಳಿದು 'ಎಸ್ಪಿ ಕಚೇರಿ ಚಲೋ' ಹೋರಾಟ ಹಮ್ಮಿಕೊಳ್ಳಲಿವೆ" ಎಂದು ಎಚ್ಚರಿಸಿದ್ದಾರೆ. ವಿಚಾರಣೆ ಹೆಸರಿನಲ್ಲಿ ಈ ಹಿಂದೆ 9 ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಆರೋಪಿಸಿರುವ ಅವರು, ಇದು ನೂರಕ್ಕೆ ನೂರು ಹಿಂದೂ ಸಂಘಟನೆಗಳನ್ನು ಗುರಿಯಾಗಿಸುವ ಹುನ್ನಾರ ಎಂದು ಕಿಡಿಕಾರಿದ್ದಾರೆ.
ಪ್ರಕರಣದ ಹಿನ್ನೆಲೆ:
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಇರಾಕೋಡಿ (ಕುರಿಯಾಲ ಗ್ರಾಮ) ಬಳಿ 2025ರ ಮೇ 25ರಂದು ಪಿಕ್‌ಅಪ್ ಟ್ರಕ್‌ನಿಂದ ಮರಳು ಇಳಿಸುತ್ತಿದ್ದ ವೇಳೆ ಅಬ್ದುಲ್ ರೆಹಮಾನ್ ಎಂಬವರನ್ನು ಮಾರಕಾಸ್ತ್ರಗಳಿಂದ ಭೀಕರವಾಗಿ ಕೊಲೆ ಮಾಡಲಾಗಿತ್ತು. ಈ ಘಟನೆಯಲ್ಲಿ ಮೃತ ಅಬ್ದುಲ್ ಜೊತೆ ಕಲಂದರ್ ಶಫಿ ಎಂಬವರ ಮೇೆಯೂ ಗಂಭೀರ ಹಲ್ಲೆ ನಡೆದಿತ್ತು. ಸುಹಾಸ್ ಶೆಟ್ಟಿ ಹತ್ಯೆಯಾದ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿದ್ದರಿಂದ ಇದು ಪ್ರತಿಕಾರದ ಕೊಲೆ ಎಂಬ ಶಂಕೆ ವ್ಯಕ್ತವಾಗಿ, ರಾಜ್ಯಾದ್ಯಂತ ದೊಡ್ಡ ಸಂಚಲನ ಸೃಷ್ಟಿಸಿತ್ತು. ಪ್ರಕರಣ ನಡೆದು ಒಂದು ವರ್ಷ ಕಳೆದು, ಈಗಾಗಲೇ ಎರಡೆರಡು ಚಾರ್ಜ್‌ಶೀಟ್ ಸಲ್ಲಿಕೆಯಾಗಿದ್ದರೂ, ಈಗ ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ನೋಟಿಸ್ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.