ಮಂಗಳೂರು, ಸೆ.22 : ಉಳ್ಳಾಲ ತಾಲೂಕಾಗಿ ಘೋಷಣೆಯಾಗಿ ಆರೇಳು ವರ್ಷಗಳು ಕಳೆದರೂ, ಇಲ್ಲಿಯವರೆಗೆ ತಾಲೂಕಿಗೆ ಅತ್ಯಗತ್ಯವಾಗಿರುವ 'ಮಿನಿ ವಿಧಾನಸೌಧ' ನಿರ್ಮಾಣವಾಗದಿರುವುದು ದುರ್ದೈವದ ಸಂಗತಿ. ಪ್ರಸ್ತುತ ತಹಶೀಲ್ದಾರ್ ಕಚೇರಿ ಒಂದು ಕಡೆಯಿದ್ದರೆ, ತಾಲೂಕು ಪಂಚಾಯತ್ ಕಚೇರಿ ಮತ್ತೊಂದು ಕಡೆ ಹಾಗೂ ಕಂದಾಯ ನಿರೀಕ್ಷಕರ ಕಚೇರಿಯು ಬೇರೊಂದು ಕಡೆಯಲ್ಲಿ ಕಾರ್ಯಾಚರಿಸುತ್ತಿವೆ. ಇದರಿಂದಾಗಿ ಸಾರ್ವಜನಿಕರು ತಮ್ಮ ಸಣ್ಣಪುಟ್ಟ ಕೆಲಸಗಳಿಗೂ ಸಹ ಕಚೇರಿಯಿಂದ ಕಚೇರಿಗೆ ವಾರಗಟ್ಟಲೆ ಅಲೆದಾಡುವ ದುಸ್ಥಿತಿ ನಿರ್ಮಾಣವಾಗಿದೆ.
ತಹಶೀಲ್ದಾರ್ ಕಚೇರಿಯಲ್ಲಿ ಮೂಲಭೂತ ವ್ಯವಸ್ಥೆಗಳಿಲ್ಲದೆ, ಜನರು ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳಿಗಾಗಿ ದಿನವಿಡೀ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಅನಿವಾರ್ಯತೆ ಇದೆ. ಸಿಬ್ಬಂದಿಗಳ ತೀವ್ರ ಕೊರತೆಯಿಂದಾಗಿ ಅರ್ಜಿ ಸ್ವೀಕೃತಿ ಮತ್ತು ವಿತರಣೆ ಎರಡನ್ನೂ ಒಂದೇ ಕೌಂಟರ್‌ನಲ್ಲಿ ನಿರ್ವಹಿಸಲಾಗುತ್ತಿದ್ದು, ಸಾರ್ವಜನಿಕರು ತಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ಬಿಟ್ಟು ಗಂಟೆಗಟ್ಟಲೆ ಕಾಯುವಂತಾಗಿದೆ.
ಇನ್ನು ಕಚೇರಿಗೆ ಬರುವ ಸಾರ್ವಜನಿಕರಿಗೆ ಸೂಕ್ತ ಶೌಚಾಲಯದ ವ್ಯವಸ್ಥೆಯೂ ಇಲ್ಲದಿರುವುದು ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಇರುವ ಶೌಚಾಲಯಗಳು ಗಬ್ಬು ನಾರುತ್ತಿದ್ದು, ಮಹಿಳೆಯರು ಮತ್ತು ವೃದ್ಧರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಬಗೆಬಗೆಯ ಬ್ಯಾನರ್ಲ್‌ಗಳ ಮೂಲಕ ಅಭಿವೃದ್ಧಿಯ ಹರಿಕಾರರೆಂದು ಬಿಂಬಿಸಿಕೊಳ್ಳುವ ಸ್ಥಳೀಯ ಜನಪ್ರತಿನಿಧಿಗಳು, ಒಮ್ಮೆ ಸಮಯ ಮೀಸಲಿಟ್ಟು ಈ ಕಚೇರಿಗಳ ದುಸ್ಥಿತಿಯನ್ನು ಕಣ್ಣಾರೆ ನೋಡಬೇಕು.
ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಜನಪ್ರತಿನಿಧಿಗಳ ಮೌನದಿಂದಾಗಿ ಜನಸಾಮಾನ್ಯರು ಸುಸ್ತಾಗಿ ಹೋಗಿದ್ದಾರೆ. ಕೂಡಲೇ ಸಂಬಂಧಪಟ್ಟವರು ಎಚ್ಚೆತ್ತುಕೊಂಡು, ಎಲ್ಲಾ ಕಚೇರಿಗಳನ್ನು ಒಂದೇ ಸೂರಿನಡಿಯಲ್ಲಿ ತರುವಂತಹ 'ಮಿನಿ ವಿಧಾನಸೌಧ'ವನ್ನು ಶೀಘ್ರವಾಗಿ ನಿರ್ಮಿಸಬೇಕು ಎಂದು ಡಿವೈಎಫ್‌ಐ (DYFI) ಉಳ್ಳಾಲ ತಾಲೂಕು ಸಮಿತಿಯು ತೀವ್ರವಾಗಿ ಒತ್ತಾಯಿಸುತ್ತದೆ.