ಉಡುಪಿ, ಸೆಪ್ಟೆಂಬರ್ 12 : ಉಡುಪಿ ಜಿಲ್ಲೆಯ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯಾವುದೇ ಪರವಾನಿಗೆ ಪಡೆಯದೆ ಸರಕಾರಿ ಜಮೀನಿನಲ್ಲಿ ಬಂಡೆ ಕಲ್ಲಿಗೆ ಅಕ್ರಮವಾಗಿ ಸ್ಪೋಟಕ ಬಳಸಿ ಸ್ಪೋಟಿಸಿದ ಘಟನೆಗೆ ಸಂಬಂಧಿಸಿದಂತೆ, ಮಣಿಪಾಲ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಘಟನೆ ನಡೆದ ಸ್ಥಳ ಹಾಗೂ ದಿನಾಂಕ: ಸೆಪ್ಟೆಂಬರ್ 05, 2026ರಂದು ಬೆಳಿಗ್ಗೆ 11:00 ಗಂಟೆಗೆ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಉಡುಪಿ ತಾಲೂಕು ಮರ್ಣೆ ಗ್ರಾಮದ ಕುಕ್ಕಿಪಲ್ಕೆ ಸರ್ವೆ ನಂ 112/2ರ 1.54 ಎಕರೆ ಸರಕಾರಿ ಸ್ಥಿರಾಸ್ತಿ ಜಮೀನಿನಲ್ಲಿ ಈ ಕೃತ್ಯ ನಡೆದಿದೆ.
ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ರೀತಿಯ ಪರವಾನಿಗೆಯನ್ನು ಪಡೆಯದೆ, ಸ್ಪೋಟಕ ವಸ್ತುಗಳನ್ನು ಬಳಸಿ ಬಂಡೆ ಕಲ್ಲನ್ನು ಅಕ್ರಮವಾಗಿ ಸ್ಪೋಟಿಸಲಾಗಿದೆ.
ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 150/2026, ಕಲಂ 288 ಜೊತೆಗೆ 3(5) BNS ಹಾಗೂ 9(b) ಸ್ಪೋಟಕ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಮಣಿಪಾಲ ಠಾಣೆಯ ಪಿಎಸ್‌ಐ ತಿಮ್ಮೇಶ್ ಬಿ.ಎನ್. ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ.
ಕೆ. ಗೋವಿಂದ ರಾಜ್ (40), ಕಾರ್ಕಳ ತಾಲೂಕು, ಶೇಖಪ್ಪ ಚಲವಾದಿ @ ಚಂದ್ರು (28), ವಿಜಯಪುರ ಜಿಲ್ಲೆ ಬಂಧಿತ ಆರೋಪಿಗಳಾಗಿದ್ದಾರೆ.
ಕೃತ್ಯಕ್ಕೆ ಬಳಸಲಾದ ಡ್ರಿಲ್ಲಿಂಗ್ ಕಂಪ್ರೆಸರ್ ಮೆಷಿನ್ ಅಟ್ಯಾಚ್ಡ್ ಮಹೀಂದ್ರಾ ಟ್ರಾಕ್ಟರ್ (KA28-TA-6421) ಹಾಗೂ ನಿಶಾನ್ ಟೆರಾನೊ ಕಾರನ್ನು (KA19-ME-7707) ಪೊಲೀಸರು ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.
ಸರಕಾರಿ ಜಮೀನುಗಳಲ್ಲಿ ಇಂತಹ ಬೇಜವಾಬ್ದಾರಿ ಹಾಗೂ ಕಾನೂನುಬಾಹಿರ ಕೃತ್ಯ ಎಸಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.