ಉಡುಪಿ, ಸೆಪ್ಟೆಂಬರ್ 03 : ಉಡುಪಿ ಜಿಲ್ಲೆಯ ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ಕಟಪಾಡಿ ಸಮೀಪದ ಅಚ್ಚಡ ರೈಲ್ವೆ ಹಳಿಗಳ ಬಳಿ ವಿವಸ್ತ್ರರಾಗಿ ನಡೆದಾಡಲು ಅಶಕ್ತರಾಗಿ ಬಿದ್ದಿದ್ದ ತಮಿಳುನಾಡು ಮೂಲದ ನಿವೃತ್ತ ಲೆಫ್ಟಿನೆಂಟ್ ಕಮಾಂಡರ್ ಶೇಖರ್ ಠಾಕೂರು (67) ಅವರನ್ನು ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅಂಬಲಪಾಡಿ ಅವರು ಕಾಪು ಪೊಲೀಸರ ನೆರವಿನೊಂದಿಗೆ ರಕ್ಷಿಸಿ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ಮೇಲ್ನೋಟಕ್ಕೆ ಇವರು ಮರೆವಿನ ಕಾಯಿಲೆ ಅಥವಾ ಖಿನ್ನತೆಯಿಂದ ಬಳಲುತ್ತಿರಬಹುದು ಎಂದು ಶಂಕಿಸಲಾಗಿದೆ. ಈ ಕುರಿತು ಮಾಹಿತಿ ಪಡೆದ ವಿಶು ಶೆಟ್ಟಿ ಸ್ಥಳಕ್ಕೆ ತೆರಳಿ ಪೊಲೀಸರ ಸಹಾಯದಿಂದ ರಕ್ಷಣೆ ಮಾಡಿದರು. ಬಳಿಕ ಅವರ ಬಳಿಯಿದ್ದ ಗುರುತು ಚೀಟಿ ಮತ್ತು ಬ್ಯಾಗ್ ಪರಿಶೀಲಿಸಿದಾಗ, ಅವರು ಸೇನೆಯಲ್ಲಿ ಲೆಫ್ಟಿನೆಂಟ್ ಕಮಾಂಡರ್ ಆಗಿ ನಿವೃತ್ತರಾಗಿರುವುದು ತಿಳಿದುಬಂದಿದೆ. ಅಲ್ಲದೆ, ಅವರ ಬ್ಯಾಗ್‌ನಲ್ಲಿ 42,000 ರೂ. ನಗದು, ಬಟ್ಟೆ ಹಾಗೂ ವಿವಿಧ ಗುರುತು ಚೀಟಿಗಳು ದೊರೆತಿವೆ.
ಈ ವ್ಯಕ್ತಿಯ ಕುರಿತು ಮಾಹಿತಿ ಇರುವವರು ಅಥವಾ ಅವರ ಸಂಬಂಧಿಕರು ಕಾಪು ಪೊಲೀಸ್ ಠಾಣೆಯನ್ನು ಅಥವಾ ಉಡುಪಿ ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸುವಂತೆ ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ವಿನಂತಿಸಿದ್ದಾರೆ.