ಉಡುಪಿ, ಸೆ 26 : ಉಡುಪಿಯ ಅಂಬಲಪಾಡಿಯಲ್ಲಿ ನಡೆದಿದ್ದ ಭರ್ಜರಿ ಮನೆ ಕಳವು ಪ್ರಕರಣದ ರಹಸ್ಯವನ್ನು ಉಡುಪಿ ನಗರ ಪೊಲೀಸರು ಭೇದಿಸಿದ್ದು, ಉತ್ತರ ಪ್ರದೇಶದ ಕುಖ್ಯಾತ 'ಬೆಡಿಯಾ ಗ್ಯಾಂಗ್'ನ ಇಬ್ಬರು ಅಂತಾರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಮೊಹಮ್ಮದ್ ಜಾಫರ್ (22) ಹಾಗೂ ಕದೀರ್ (32) ಬಂಧಿತ ಆರೋಪಿಗಳು.
ಕಳೆದ ಜುಲೈ 1ರಿಂದ ಜುಲೈ 9ರ ಮಧ್ಯಾವಧಿಯಲ್ಲಿ, ಅಂಬಲಪಾಡಿಯ ಕುಂಜುಗುಡ್ಡೆ ರಸ್ತೆಯ ಸಹಾರಾ ಅಪಾರ್ಟ್‌ಮೆಂಟ್ ಬಳಿಯಿರುವ ಎ.ಎಸ್. ರಾಮಮೂರ್ತಿ ಅವರ ಮನೆಗೆ ನುಗ್ಗಿದ್ದ ಕಳ್ಳರು, ಮನೆಯಲ್ಲಿದ್ದ 6 ಲಕ್ಷ ರೂ. ನಗದು ಹಾಗೂ 10 ಸಾವಿರ ರೂ. ಮೌಲ್ಯದ 3 ವಾಚ್‌ಗಳನ್ನು ದೋಚಿಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಉಡುಪಿ ನಗರ ಪೊಲೀಸರು, ಸೆಪ್ಟೆಂಬರ್ 2ರಂದು ಆರೋಪಿ ಮೊಹಮ್ಮದ್ ಜಾಫರ್‌ನನ್ನು ಉಡುಪಿ ಇಂದ್ರಾಳಿ ರೈಲ್ವೆ ನಿಲ್ದಾಣದ ಬಳಿ ಬಂಧಿಸಿದರು.
ವಿಚಾರಣೆ ವೇಳೆ ಆತ ತನ್ನ ಸಹಚರ ಕದೀರ್ ಜೊತೆ ಸೇರಿ ಕಳವು ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಆತನಿಂದ 1.5 ಲಕ್ಷ ರೂ. ನಗದು ಹಾಗೂ ಮೊಬೈಲ್ ವಶಪಡಿಸಿಕೊಳ್ಳಲಾಗಿತ್ತು. ಬಳಿಕ ಪೊಲೀಸರು ಉತ್ತರ ಪ್ರದೇಶಕ್ಕೆ ತೆರಳಿ ಅಲ್ಲಿಂದಲೂ 1,06,000 ರೂ. ವಶಕ್ಕೆ ಪಡೆದಿದ್ದಾರೆ.
ಮುಂದುವರಿದ ತನಿಖೆಯ ಭಾಗವಾಗಿ ಸೆಪ್ಟೆಂಬರ್ 25ರಂದು ಮತ್ತೋರ್ವ ಆರೋಪಿ ಕದೀರ್‌ನನ್ನು ಮೂಡಬಿದರೆಯಲ್ಲಿ ಬಂಧಿಸಲಾಗಿದೆ. ಈತನಿಂದ 1.65 ಲಕ್ಷ ರೂ. ನಗದು, 2 ಬೆಳ್ಳಿ ನಾಣ್ಯಗಳು, 5 ವಾಚ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ ಸ್ಕ್ರೂಡ್ರೈವರ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಒಟ್ಟು 4,50,500 ರೂ. ಮೌಲ್ಯದ ಸೊತ್ತುಗಳನ್ನು ಜಪ್ತಿ ಮಾಡಲಾಗಿದೆ.
ಬಂಧಿತ ಆರೋಪಿಗಳು ಉತ್ತರ ಪ್ರದೇಶದ 'ಬೆಡಿಯಾ ಗ್ಯಾಂಗ್' ಸದಸ್ಯರಾಗಿದ್ದಾರೆ. ಪ್ರಮುಖ ಆರೋಪಿ ಕದೀರ್ ವಿರುದ್ಧ ಉತ್ತರ ಪ್ರದೇಶ ಹಾಗೂ ಉತ್ತರಾಖಂಡಗಳಲ್ಲಿ ಅಕ್ರಮ ಶಸ್ತ್ರಾಸ್ತ್ರ ಹಾಗೂ ಮನೆ ಕಳ್ಳತನ ಸೇರಿದಂತೆ ಒಟ್ಟು 6 ಗಂಭೀರ ಪ್ರಕರಣಗಳು ದಾಖಲಾಗಿವೆ. ಮೊಹಮ್ಮದ್ ಜಾಫರ್ ವಿರುದ್ಧವೂ ಉತ್ತರಾಖಂಡದಲ್ಲಿ ಕಳವು ಪ್ರಕರಣ ದಾಖಲಾಗಿದೆ.
ಉಡುಪಿ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ನಿರ್ದೇಶನ, ಹೆಚ್ಚುವರಿ ಎಸ್‌ಪಿ ಸುಧಾಕರ್ ನಾಯ್ಕ, ಡಿವೈಎಸ್ಪಿ ಬೆಳ್ಳಿಯಪ್ಪ ಮಾರ್ಗದರ್ಶನದಲ್ಲಿ, ಉಡುಪಿ ನಗರ ಠಾಣೆಯ ನಿರೀಕ್ಷಕ ಮಹೇಶ್ ಪ್ರಸಾದ್ ನೇತೃತ್ವದ ಪೊಲೀಸ್ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ.