ಉಡುಪಿ, ಸೆಪ್ಟೆಂಬರ್ 08: ಅನಧಿಕೃತ ಎಟಿಎಂ ಕಾರ್ಡ್ ಬಳಕೆಯಿಂದ ವ್ಯವಹಾರ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ವ್ಯಕ್ತಿಯೊಬ್ಬರು, ಕೆನರಾ ಬ್ಯಾಂಕ್ ಎಟಿಎಂ ಯಂತ್ರದ ಡಿಸ್‌ಪ್ಲೇಯನ್ನು ಧ್ವಂಸಗೊಳಿಸಿರುವ ಘಟನೆ ಉಡುಪಿ ಜಿಲ್ಲೆಯ ಮಲ್ಪೆ ಹೂಡೆಯಲ್ಲಿ ವರದಿಯಾಗಿದೆ.
ರಾತ್ರಿ ಸುಮಾರು 9:52ರ ಸುಮಾರಿಗೆ ಹೂಡೆಯ ಕೆನರಾ ಬ್ಯಾಂಕ್ ಶಾಖೆಯ ಎಟಿಎಂ ಕೇಂದ್ರಕ್ಕೆ ಹಣ Withdraw ಮಾಡಲು ಬಂದಿದ್ದ ವ್ಯಕ್ತಿಯೊಬ್ಬರು, ಅನಧಿಕೃತ ಕಾರ್ಡ್ ಬಳಸಿದ್ದಾರೆ ಎಂಬ ಕಾರಣಕ್ಕೆ ಎಟಿಎಂ ಯಂತ್ರವು ವ್ಯವಹಾರವನ್ನು ನಿರಾಕರಿಸಿತ್ತು.
ವ್ಯವಹಾರ ವಿಫಲಗೊಂಡಿದ್ದಕ್ಕೆ ಕೆರಳಿದ ಆರೋಪಿ, ಮೊದಲು ತನ್ನ ಬಳಿಯಿದ್ದ ಬೈಕ್ ಕೀಯಿಂದ ಎಟಿಎಂ ಡಿಸ್‌ಪ್ಲೇಯನ್ನು ಜಖಂ ಗೊಳಿಸಿದ್ದಾನೆ. ಅಷ್ಟೇ ಅಲ್ಲದೆ, ಅಕ್ರೋಶ ತಣ್ಣಗಾಗದೆ ಎಟಿಎಂ ಆವರಣದಲ್ಲಿದ್ದ ಅಗ್ನಿಶಾಮಕ ಸಾಧನವನ್ನು (Fire Extinguisher) ಎತ್ತಿಕೊಂಡು ಡಿಸ್‌ಪ್ಲೇ ಮೇಲೆ ಎರಡು ಬಾರಿ ಬಲವಾಗಿ ಹೊಡೆದಿದ್ದಾನೆ. ಪರಿಣಾಮವಾಗಿ ಎಟಿಎಂ ಯಂತ್ರದ ಡಿಸ್‌ಪ್ಲೇ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಬ್ಯಾಂಕ್ ಆಸ್ತಿಗೆ ಭಾರೀ ನಷ್ಟ ಉಂಟಾಗಿದೆ.
ಈ ಕೃತ್ಯ ಎಸಗಿದ ಆರೋಪಿಯನ್ನು ಇಸ್ಮಾಯಿಲ್ ಬಿಜಾಪುರಿ ಎಂದು ಗುರುತಿಸಲಾಗಿದ್ದು, ಈ ಕುರಿತು ಕೆನರಾ ಬ್ಯಾಂಕ್ ಹೂಡೆ ಶಾಖೆಯ ಮ್ಯಾನೇಜರ್ ಕೆ. ರವಿಕುಮಾರ್ ಅವರು ನೀಡಿದ ಅಧಿಕೃತ ದೂರಿನ ಆಧಾರದ ಮೇಲೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.