ನವದೆಹಲಿ,ಸೆ 21 : ದೇಶಾದ್ಯಂತ ವ್ಯಾಪಕ ಸಂಚಲನ ಮೂಡಿಸಿದ್ದ ಧರ್ಮಸ್ಥಳದ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪ್ರಕರಣದ ಮರುತನಿಖೆ ನಡೆಸುವಂತೆ ಹಾಗೂ ಇದಕ್ಕಾಗಿ ವಿಶೇಷ ತನಿಖಾ ತಂಡ (SIT) ರಚಿಸುವಂತೆ ರಾಜ್ಯ ಸರ್ಕಾರಕ್ಕೆ ಅತ್ಯುನ್ನತ ನ್ಯಾಯಾಲಯ ಸ್ಪಷ್ಟ ನಿರ್ದೇಶನ ನೀಡಿದೆ. ಸಂತ್ರಸ್ತೆಯ ತಾಯಿ ಕುಸುಮಾವತಿ ಗೌಡ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜಯ್ ಕುಮಾರ್ ನೇತೃತ್ವದ ಪೀಠ ಈ ಆದೇಶ ಹೊರಡಿಸಿದೆ.
ಸಿಬಿಐ ತನಿಖೆ ಬಗ್ಗೆ ಅಸಮಾಧಾನ:
ಈ ಹಿಂದೆ ಸಿಬಿಐ ನಡೆಸಿದ್ದ ತನಿಖೆಯ ವೈಖರಿಯ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ತನಿಖೆಯಲ್ಲಿ ಹಲವು ಲೋಪದೋಷಗಳಿದ್ದು, ನೈಜ ಅಪರಾಧಿಗಳನ್ನು ಪತ್ತೆಹಚ್ಚುವಲ್ಲಿ ತನಿಖಾ ಸಂಸ್ಥೆ ವಿಫಲವಾಗಿದೆ ಎಂದು ಪೀಠ ಅಭಿಪ್ರಾಯಪಟ್ಟಿತ್ತು. ನಿಷ್ಪಕ್ಷಪಾತ ತನಿಖೆಗಾಗಿ ನೂತನ ಎಸ್‌ಐಟಿ ತಂಡವನ್ನು ಕೂಡಲೇ ರಚಿಸಬೇಕು.
ಈ ಹಿಂದೆ ಪ್ರಕರಣದ ತನಿಖೆ ನಡೆಸಿದ್ದ ಯಾವುದೇ ಪೊಲೀಸ್ ಅಥವಾ ಸಿಬಿಐ ಅಧಿಕಾರಿಗಳು ಹೊಸ ಎಸ್‌ಐಟಿ ತಂಡದಲ್ಲಿ ಇರಬಾರದು. ಹೊಸ ತಂಡವು ತನಿಖೆ ನಡೆಸಿ, ಮುಂದಿನ 3 ತಿಂಗಳ ಒಳಗಾಗಿ ಸಮಗ್ರ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು.
ಹಿನ್ನೆಲೆ:
2012ರ ಅಕ್ಟೋಬರ್‌ನಲ್ಲಿ 17 ವರ್ಷದ ಕಾಲೇಜು ವಿದ್ಯಾರ್ಥಿನಿ ಸೌಜನ್ಯಾ ಅವರ ಅತ್ಯಾಚಾರ ಮತ್ತು ಕ್ರೂರ ಹತ್ಯೆ ನಡೆದಿತ್ತು. ಈ ಪ್ರಕರಣದಲ್ಲಿ ಸಂತೋಷ್ ರಾವ್ ಎಂಬಾತನನ್ನು ಬಂಧಿಸಲಾಗಿದ್ದು, ಸಿಬಿಐ ವಿಶೇಷ ನ್ಯಾಯಾಲಯವು 2023ರಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದ ಆತನನ್ನು ದೋಷಮುಕ್ತಗೊಳಿಸಿತ್ತು. ನ್ಯಾಯಾಲಯದ ಈ ಆದೇಶದಿಂದ ಸೌಜನ್ಯಾ ಕುಟುಂಬಕ್ಕೆ ನ್ಯಾಯ ಸಿಗುವ ಹೊಸ ಭರವಸೆ ಮೂಡಿದ್ದು, ಕರಾವಳಿ ಭಾಗದಲ್ಲಿ ತೀರ್ಪಿಗೆ ವ್ಯಾಪಕ ಸ್ವಾಗತ ವ್ಯಕ್ತವಾಗಿದೆ.