ಶಿವಮೊಗ್ಗ, ಸೆಪ್ಟೆಂಬರ್, 04 : ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದಾರೆಂಬ ಕಾರಣಕ್ಕೆ 2, 3 ಹಾಗೂ 4ನೇ ತರಗತಿಯ ಮೂವರು ಮಕ್ಕಳ ಮೇಲೆ ಶಿಕ್ಷಕಿಯು ಕೋಲಿನಿಂದ ಮನಬಂದಂತೆ ಹಲ್ಲೆ ನಡೆಸಿದ ಘಟನೆ ಶಿವಮೊಗ್ಗದ ಸಾಗರ ತಾಲೂಕಿನ ತುಮರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿರುವಾಸೆ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಕಿಗೆ ಬಂದಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ತವರು ಕ್ಷೇತ್ರದಲ್ಲೇ ಈ ಘಟನೆ ನಡೆದಿದ್ದು ಶಿಕ್ಷಕಿಯ ಹಲ್ಲೆಯಿಂದ ಮಕ್ಕಳ ಬೆನ್ನಿನ ಮೇಲೆ ಬಾಸುಂಡೆ ಎದ್ದು ರಕ್ತ ಬಂದಿದೆ.
ರಕ್ಷಿತಾ ಎಂಬ ಅತಿಥಿ ಶಿಕ್ಷಕಿಯು ಈ ಹಲ್ಲೆ ನಡೆಸಿದ್ದಾರೆಂದು ತಿಳಿದುಬಂದಿದ್ದು, ಶಾಲೆಯಿಂದ ಮನೆಗೆ ಹೋದ ಮಕ್ಕಳ ಗಾಯಗಳನ್ನು ನೋಡಿ ಪೋಷಕರು ಬೆಚ್ಚಿಬಿದ್ದಿದ್ದಾರೆ.ಮಕ್ಕಳಿಗೆ ಅಕ್ಷರ ಮತ್ತು ಜ್ಞಾನ ಕಲಿಸಬೇಕಾದ ಶಿಕ್ಷಕಿಯಿಂದಲೇ ಇಂತಹ ಅಮಾನವೀಯ ಕೃತ್ಯ ನಡೆದಿರುವುದಕ್ಕೆ ಗ್ರಾಮಸ್ಥರು ಮತ್ತು ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ಕುರಿತು ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಆರೋಪಿತ ಶಿಕ್ಷಕಿ ವಿರುದ್ಧ ತಕ್ಷಣವೇ ತನಿಖೆ ನಡೆಸಿ ಕಠಿಣ ಶಿಸ್ತು ಕ್ರಮ ಕೈಗೊಳ್ಳಬೇಕು ಹಾಗೂ ಸಮಗ್ರ ತನಿಖೆ ನಡೆಸಿ ಸತ್ಯಾಸತ್ಯತೆ ಬಹಿರಂಗಪಡಿಸಬೇಕೆಂದು ಪೋಷಕರು ಒತ್ತಾಯಿಸಿದ್ದಾರೆ.