ಶಿವಮೊಗ್ಗ, ಸೆಪ್ಟೆಂಬರ್ 05 : ನ್ಯಾಯಾಲಯದಿಂದ ಮೂರು ಬಾರಿ ಜಾಮೀನು ರಹಿತ ವಾರೆಂಟ್ (NBW) ಜಾರಿಯಾಗಿದ್ದರೂ ತಲೆಮರೆಸಿಕೊಂಡಿದ್ದ ರೌಡಿಶೀಟರ್ ಒಬ್ಬನನ್ನು ಶಿವಮೊಗ್ಗ ಜಿಲ್ಲೆಯ ಪೊಲೀಸರು ಕೊಳಕ್ಕೆ ಹಾರಿ ಸಾಹಸಮಯವಾಗಿ ಬಂಧಿಸಿರುವ ಘಟನೆ ವರದಿಯಾಗಿದೆ.
ಭದ್ರಾವತಿ ನಿವಾಸಿ, 19 ವರ್ಷದ ದಿಲೀಪ್ ಅಲಿಯಾಸ್ ಕರಿಯಾ ಬಂಧಿತ ಆರೋಪಿ. ಈತ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ದೀರ್ಘಕಾಲದಿಂದ ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆಗಿಳಿದ ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆಯ ಪಿಎಸ್‌ಐ ರಮೇಶ್ ಹಾಗೂ ಸಿಬ್ಬಂದಿ ಪ್ರಸನ್ನ ಅವರು ಆರೋಪಿಯನ್ನು ಬೆನ್ನಟ್ಟಿದ್ದರು. ಪೊಲೀಸರಿಂದ ತಪ್ಪಿಸಿಕೊಳ್ಳಲು ಆರೋಪಿ ಕೊಳದ ಕಳೆ ಗಿಡಗಳ ನಡುವೆ ಅಡಗಿಕೊಂಡಿದ್ದ. ತಕ್ಷಣ ಎಚ್ಚೆತ್ತ ಪಿಎಸ್‌ಐ ರಮೇಶ್ ಹಾಗೂ ಪೇದೆ ಪ್ರಸನ್ನ ಅವರು ನೀರಿನೊಳಗೆ ಧುಮುಕಿ, ರೌಡಿಶೀಟರ್ ಅನ್ನು ಯಶಸ್ವಿಯಾಗಿ ಬಂಧಿಸಿದ್ದಾರೆ.ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮಕ್ಕಾಗಿ ಅಧಿಕಾರಿಗಳು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.