ತೆಲಂಗಾಣ, ಸೆ 20 : ತೆಲಂಗಾಣದ ಖಮ್ಮಂ ಮೂಲದ ಖ್ಯಾತ ನರರೋಗ ತಜ್ಞರೊಬ್ಬರು ಹೈದರಾಬಾದ್-ಖಮ್ಮಂ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಸಜೀವ ದಹನವಾಗಿರುವ ದಾರುಣ ಘಟನೆ ವರದಿಯಾಗಿದೆ.
ಖಮ್ಮಂನ ಖಾಸಗಿ ಆಸ್ಪತ್ರೆಯ ನರರೋಗ ತಜ್ಞರೊಬ್ಬರು ಭೀಕರ ಕಾರು ಅಪಘಾತದಲ್ಲಿ ಸಜೀವ ದಹನವಾಗಿರುವ ಆಘಾತಕಾರಿ ಘಟನೆ ವರದಿಯಾಗಿದೆ.
ಖಮ್ಮಂನ ಮಮತಾ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ 50 ವರ್ಷ ವಯಸ್ಸಿನ ಡಾ. ಕಾಸಕುರ್ತಿ ಜಗದೀಶ್ ಮೃತ ದುರ್ದೈವಿ. ಸೂರ್ಯಪೇಟೆ ಬಳಿಯ ಪಿಳ್ಳಾಲಮರ್ರಿ ಫ್ಲೈಓವರ್ ಸಮೀಪ ಎನ್‌ಎಚ್-365ಬಿಬಿ ಹೆದ್ದಾರಿಯಲ್ಲಿ ಭಾನುವಾರ ಬೆಳಿಗ್ಗೆ 7.15ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ.
ಡಾ. ಜಗದೀಶ್ ಚಲಾಯಿಸುತ್ತಿದ್ದ ವೋಲ್ವೋ ಕಾರು ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ (ಡಿವೈಡರ್)ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನಲ್ಲಿ ಕ್ಷಣಮಾತ್ರದಲ್ಲಿ ಬೆಂಕಿ ಹತ್ತಿಕೊಂಡಿದ್ದು, ಚಾಲಕನ ಸೀಟಿನಲ್ಲೇ ಅವರು ಸಿಲುಕಿಕೊಂಡಿದ್ದಾರೆ.
ಸ್ಥಳದಲ್ಲಿದ್ದವರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದfರೂ, ಅಷ್ಟರೊಳಗೆ ಕಾರು ಸಂಪೂರ್ಣವಾಗಿ ಸುಟ್ಟುಹೋಗಿತ್ತು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಷ್ಟರಲ್ಲಿ ಅನಾಹುತ ಸಂಭವಿಸಿತ್ತು.
ಮೃತದೇಹ ಗುರುತು ಸಿಗದಷ್ಟು ಸುಟ್ಟುಹೋಗಿದ್ದು, ಕಾರಿನ ತಾತ್ಕಾಲಿಕ ನೋಂದಣಿ ಸಂಖ್ಯೆ ಮತ್ತು ಟೋಲ್ ಗೇಟ್ ಮಾಹಿತಿಯ ಆಧಾರದ ಮೇಲೆ ಪೊಲೀಸರು ಮೃತರನ್ನು ಗುರುತಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ವಿಧಿವಿಜ್ಞಾನ (ಫಾರೆನ್ಸಿಕ್) ತಂಡದವರು ಅವಶೇಷಗಳನ್ನು ಸಂಗ್ರಹಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸೂರ್ಯಪೇಟೆ ಸರ್ಕಾರಿ ಜನರಲ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಸೂರ್ಯಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಚಾಲಕನ ನಿಯಂತ್ರಣ ತಪ್ಪಲು ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿಸಿದ್ದಾರೆ.