ಮಂಗಳೂರು,ಸೆಪ್ಟೆಂಬರ್ 03 : ಮಹಿಳೆಯರಲ್ಲಿ ಜಾಗೃತಿ ಮೂಡಿಸಿ, ನಾಯಕತ್ವ ಸಾಮರ್ಥ್ಯ ಬೆಳೆಸುವ ಹಾಗೂ ಸಾಮಾಜಿಕ-ರಾಜಕೀಯ ಬದಲಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಪ್ರೇರೇಪಿಸುವ ಉದ್ದೇಶದಿಂದ ವಿಮೆನ್ ಇಂಡಿಯಾ ಮೂವ್‌ಮೆಂಟ್ ಆಶ್ರಯದಲ್ಲಿ ಸೆಪ್ಟೆಂಬರ್ 5ರಂದು ಅಪರಾಹ್ನ 2:30ಕ್ಕೆ ಮಂಗಳೂರಿನ ಪುರಭವನದಲ್ಲಿ ‘ರೈಸ್ ಆಂಡ್ ರಿಕ್ಲೇಮ್’ ಬೃಹತ್ ಮಹಿಳಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯೆ ಹಾಗೂ ಸಮಾವೇಶದ ನಿರ್ದೇಶಕಿ ಮಿಸ್ರಿಯಾ ಕಣ್ಣೂರು ತಿಳಿಸಿದ್ದಾರೆ.
ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರು ಕೇವಲ ಕುಟುಂಬ ನಿರ್ವಹಣೆಗೆ ಸೀಮಿತವಾಗದೆ, ರಾಜಕೀಯ, ಆಡಳಿತ, ಆರ್ಥಿಕತೆ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಶಿಕ್ಷಣ, ಉದ್ಯೋಗ, ಸುರಕ್ಷತೆ ಹಾಗೂ ಆರ್ಥಿಕ ಸ್ವಾವಲಂಬನೆಗಾಗಿ ಮಹಿಳೆಯರು ಒಗ್ಗಟ್ಟಿನಿಂದ ಧ್ವನಿ ಎತ್ತುವುದು ಇಂದಿನ ಅಗತ್ಯವಾಗಿದೆ ಎಂದರು.
ಮುಖ್ಯಾಂಶಗಳು:
ಮಹಿಳೆಯರ ಮೇಲಿನ ದೌರ್ಜನ್ಯ, ಶೋಷಣೆ ಮತ್ತು ಯುವಜನರ ಭವಿಷ್ಯ ಹಾಳುಮಾಡುತ್ತಿರುವ ಮಾದಕ ವ್ಯಸನದ ವಿರುದ್ಧ ಮಹಿಳೆಯರು ಮುಂಚೂಣಿ ಶಕ್ತಿಯಾಗಬೇಕು.
ಮಹಿಳೆಯರ ತಾಳ್ಮೆ ಮಿತಿಮೀರಿ ಅವರು ಎದ್ದುನಿಂತರೆ ದೊಡ್ಡ ಕ್ರಾಂತಿಯಾಗಿ ಹೊಸ ಇತಿಹಾಸ ನಿರ್ಮಾಣವಾಗಬಹುದು.
ಸಮಾವೇಶದಲ್ಲಿ ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್, ವಕೀಲರಾದ ಅರ್ಷಿತಾ, ಹೈಕೋರ್ಟ್ ನ್ಯಾಯವಾದಿ ಹಿನಾ ಹೈದರ್ ಹಾಗೂ ಮಮತಾ ಆನೇಕಲ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ವಿಮೆನ್ ಇಂಡಿಯಾ ಮೂವ್‌ಮೆಂಟ್ ಮಂಗಳೂರು ನಗರ ಜಿಲ್ಲಾಧ್ಯಕ್ಷೆ ಆಯಿಶಾ ಯಾಸ್ಮಿನ್, ಪ್ರಧಾನ ಕಾರ್ಯದರ್ಶಿ ಶಮೀಮಾ ತುಂಬೆ ಹಾಗೂ ಎಸ್‌ಡಿಪಿಐ ಜಿಲ್ಲಾ ಸದಸ್ಯೆ ಸಂಶಾದ್ ಅಬೂಬಕರ್ ಉಪಸ್ಥಿತರಿದ್ದರು.