BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

Puttur ಉಪ್ಪಿನಂಗಡಿ ಗ್ರಾ.ಪಂ. ಭ್ರಷ್ಟಾಚಾರದ ಮಹಾಪೂರ: ಪುತ್ತೂರು ಶಾಸಕ ಅಶೋಕ್ ರೈ ಅವರೇ, ನಿಮ್ಮ ಮೂಗಿನಡಿಯೇ ನಡೆಯುವ ಭ್ರಷ್ಟಾಚಾರದ ಕುರಿತು ಜಾಣ ಮೌನ ಏಕೆ? - ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು ಆಕ್ರೋಶ


ಪುತ್ತೂರು, ಸೆಪ್ಟೆಂಬರ್ 11: ಪುತ್ತೂರು ಶಾಸಕ ಅಶೋಕ್ ರೈ ಅವರೇ, ನಿಮ್ಮ ಮೂಗಿನಡಿಯೇ ನಡೆಯುವ ಭ್ರಷ್ಟಾಚಾರದ ಕುರಿತು ಜಾಣ ಮೌನ ಏಕೆ  ಎಂದು MLC ಕಿಶೋರ್ ಕುಮಾರ್ ಪುತ್ತೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಮೈಕ್ ಸಿಕ್ಕಾಗಲೆಲ್ಲಾ ಭ್ರಷ್ಟಾಚಾರದ ವಿರುದ್ಧ ಉದ್ದುದ್ದ ನೀತಿಬೋಧನೆ ಮಾಡುವ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ಸ್ವಕ್ಷೇತ್ರದ ಉಪ್ಪಿನಂಗಡಿ ಗ್ರಾಮ ಪಂಚಾಯಿತಿಯಲ್ಲಿ ಭ್ರಷ್ಟಾಚಾರದ ದಂಧೆ ಬೆತ್ತಲಾಗಿದ್ದು, ಶಾಸಕರು ಈ ಬಗ್ಗೆ ತಳೆದಿರುವ ಜಾಣ ಮೌನ ಹಲವು ಗಂಭೀರ ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಉಡುಪಿ-ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಶಾಸಕರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬುಧವಾರ (ಸೆ. 9) ದಕ್ಷಿಣ ಕನ್ನಡ ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳ ತಂಡ ಉಪ್ಪಿನಂಗಡಿ ಪಂಚಾಯಿತಿಗೆ ಕಡತ ಪರಿಶೀಲನೆಗೆ ಭೇಟಿ ನೀಡಿದ ವೇಳೆ ಸಾರ್ವಜನಿಕರಿಂದ ವ್ಯಕ್ತವಾದ ಆಕ್ರೋಶ ಹಾಗೂ ದೂರುಗಳ ಸರಮಾಲೆಯನ್ನು ಉಲ್ಲೇಖಿಸಿ ಶಾಸಕರು ಕಟುವಾದ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಮೈಕ್ ಮುಂದೆ ಭಾಷಣ, ಮನೆಯಂಗಳದಲ್ಲೇ ಲೂಟಿ:

"ವೇದಿಕೆಗಳಲ್ಲಿ ನಿಂತು ತಮ್ಮ ಕ್ಷೇತ್ರದಲ್ಲಿ ಯಾರಾದರೂ ಲಂಚ ಕೇಳಿದರೆ ನನ್ನ ಗಮನಕ್ಕೆ ತನ್ನಿ ಎಂದು ವೀರಾವೇಷದಲ್ಲಿ ಗರ್ಜಿಸುವ ಶಾಸಕ ಅಶೋಕ್ ರೈ ಅವರಿಗೆ, ತಮ್ಮದೇ ಕ್ಷೇತ್ರದ ಉಪ್ಪಿನಂಗಡಿ ಪಂಚಾಯಿತಿಯಲ್ಲಿ ನಡೆಯುತ್ತಿರುವ ಈ ಬಹಿರಂಗ ಲೂಟಿ ಕಣ್ಣಿಗೆ ಕಾಣುತ್ತಿಲ್ಲವೇ? ಭ್ರಷ್ಟಾಚಾರದ ವಿರುದ್ಧದ ಹೋರಾಟ ಕೇವಲ ಭಾಷಣಕ್ಕೆ ಸೀಮಿತವಾಗಿರಬಾರದು; ಅಧಿಕಾರದ ಅಂಗಳದಲ್ಲೂ ಇರಬೇಕು. ಮನೆಯ ಅಂಗಳದಲ್ಲೇ ಭ್ರಷ್ಟಾಚಾರದ ಹೊಳೆ ಹರಿಯುತ್ತಿರುವಾಗ ಶಾಸಕರು ಕಣ್ಮುಚ್ಚಿ ಕುಳಿತಿರುವುದು, ಈ ಅಕ್ರಮಗಳಲ್ಲಿ ಅವರಿಗೂ ಪಾಲಿದೆಯೇ ಎಂಬ ಸಾರ್ವಜನಿಕರ ಸಂಶಯಕ್ಕೆ ಪುಷ್ಟಿ ನೀಡುತ್ತಿದೆ. ಇತರರ ಮೇಲೆ ಬೆರಳು ತೋರಿಸುವ ಮುನ್ನ ತಮ್ಮ ಕ್ಷೇತ್ರದ ಆಡಳಿತ ವ್ಯವಸ್ಥೆಯ ಬಗ್ಗೆ ಶಾಸಕರು ಆತ್ಮಾವಲೋಕನ ಮಾಡಿಕೊಳ್ಳಲಿ" ಎಂದು ಕಿಶೋರ್ ಕುಮಾರ್ ಪುತ್ತೂರು ನೇರವಾಗಿ ಚಾಟಿ ಬೀಸಿದ್ದಾರೆ.

ತಾ.ಪಂ. ಇಒಗೆ ಎರಡು ತಿಂಗಳ ಹಿಂದೆಯೇ ತಿಳಿಸಿದ್ದರೂ ನಿರ್ಲಕ್ಷ್ಯ:

"ಉಪ್ಪಿನಂಗಡಿ ಗ್ರಾಮ ಪಂಚಾಯಿತಿಯಲ್ಲಿ ನಡೆಯುತ್ತಿರುವ ಅವ್ಯವಹಾರಗಳು, ಲಂಚಗುಳಿತನ ಹಾಗೂ ಸಾರ್ವಜನಿಕರಿಗೆ ನೀಡುತ್ತಿರುವ ಕಿರುಕುಳದ ಬಗ್ಗೆ ನಾನು ಖುದ್ದಾಗಿ ಎರಡು ತಿಂಗಳ ಹಿಂದೆಯೇ ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಿಗೆ (EO) ದೂರವಾಣಿ ಕರೆ ಮಾಡಿ ಸಂಪೂರ್ಣ ವಿವರ ನೀಡಿದ್ದೆ. ಸಂಬಂಧಪಟ್ಟ ಪಿಡಿಒ ವಿರುದ್ಧ ತಕ್ಷಣವೇ ಶಿಸ್ತುಕ್ರಮ ಕೈಗೊಳ್ಳಬೇಕು, ಆ ಜಾಗಕ್ಕೆ ದಕ್ಷ ಅಧಿಕಾರಿಯನ್ನು ನಿಯೋಜಿಸಬೇಕು ಎಂದು ಸ್ಪಷ್ಟವಾಗಿ ತಿಳಿಸಿದ್ದೆ. ಆದರೆ, ತಾಲೂಕು ಪಂಚಾಯತ್ ಇಒ ಅವರಿಗೆ ಎಲ್ಲವೂ ಗೊತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಸಂಪೂರ್ಣ ಮೌನ ವಹಿಸಿದ್ದಾರೆ. ಶಾಸಕರ ಜತೆಗೆ ತಾಲೂಕು ಪಂಚಾಯತ್ ಇಒ ಅವರಿಗೂ ಈ ಲೂಟಿಯ ಕಮಿಷನ್ ಕಟ್ಟು ಹೋಗ್ತಾ ಇದೆಯಾ? ಎಂಬ ಬಲವಾದ ಸಂಶಯ ಸಾರ್ವಜನಿಕರಲ್ಲಿ ಮೂಡಿದೆ," ಎಂದು ಶಾಸಕರು ಕಿಡಿಕಾರಿದ್ದಾರೆ.

ಅಂಗವಿಕಲರಿಂದ ₹1 ಲಕ್ಷ ಲಂಚ, ದಲ್ಲಾಳಿಗಳ ರಾಜ್ ಭಂಡಾರ:

"ಉಪ್ಪಿನಂಗಡಿ ಪಂಚಾಯಿತಿಯಲ್ಲಿ ಲಂಚ ನೀಡದೆ ಬಡವರ ಯಾವ ಕೆಲಸಗಳೂ ನಡೆಯುತ್ತಿಲ್ಲ ಎಂಬುದು ಲೋಕಾಯುಕ್ತರ ಪರಿಶೀಲನೆಯಲ್ಲಿ ಸಾಬೀತಾಗಿದೆ. ಮನೆಗೆ ಡೋರ್ ನಂಬರ್ ನೀಡಲು ಸ್ವತಃ ಅಂಗವಿಕಲ ವ್ಯಕ್ತಿಯೊಬ್ಬರಿಂದ ಮಧ್ಯವರ್ತಿ ಮೂಲಕ ₹1 ಲಕ್ಷ ರೂಪಾಯಿ ಲಂಚ ವಸೂಲಿ ಮಾಡಲಾಗಿದೆ ಎಂಬ ದೂರು ನಾಗರಿಕ ಸಮಾಜವೇ ತಲೆತಗ್ಗಿಸುವಂತದ್ದು. ಪಂಚಾಯಿತಿ ಕಚೇರಿಯಲ್ಲಿ ವ್ಯಾಪಾರ ಪರವಾನಗಿ ನವೀಕರಣ, ಮನೆ ತೆರಿಗೆ, ಕಡತ ವಿಲೇವಾರಿ ಪ್ರತಿಯೊಂದಕ್ಕೂ ದಲ್ಲಾಳಿಗಳ ಮೂಲಕವೇ ವ್ಯವಹಾರ ನಡೆಯುತ್ತಿದೆ. ಅಧಿಕಾರಿಗಳ ಗಮನಕ್ಕೆ ಬಾರದೆ ಈ ಮಧ್ಯವರ್ತಿಗಳ ದಂಧೆ ನಡೆಯಲು ಸಾಧ್ಯವೇ? ಜನಸಾಮಾನ್ಯರ ಹಕ್ಕಿನ ಕಚೇರಿ ಇಂದು ಬ್ರೋಕರ್‌ಗಳ ಅಡ್ಡೆಯಾಗಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ವರ್ಗಾವಣೆಯಾದರೂ ಪ್ರಭಾರ ನೀಡಿದ ಹಿಂದಿರುವ ಶಾಸಕರ ಕೃಪಾಕಟಾಕ್ಷ:

"ಸುಮಾರು 6-7 ವರ್ಷಗಳಿಗೂ ಹೆಚ್ಚು ಕಾಲ ಇದೇ ಪಂಚಾಯಿತಿಯಲ್ಲಿ ಠಿಕಾಣಿ ಹೂಡಿದ್ದ ಪಿಡಿಒ ವಿರುದ್ಧ ಇಷ್ಟೆಲ್ಲಾ ಸಾರ್ವಜನಿಕ ಆರೋಪಗಳಿದ್ದರೂ, ಅವರನ್ನು ವರ್ಗಾವಣೆ ಮಾಡಿದ ಬೆನ್ನಲ್ಲೇ ಮತ್ತೆ ಉಪ್ಪಿನಂಗಡಿಗೇ ಪ್ರಭಾರ ಅಧಿಕಾರಿಯಾಗಿ ಉಳಿಸಿಕೊಂಡಿರುವುದು ಯಾರ ಹಿತಾಸಕ್ತಿಗಾಗಿ? ತಾ.ಪಂ. ಇಒ ಬೆಂಬಲ ಹಾಗೂ ಶಾಸಕರ ನೇರ ಆಶೀರ್ವಾದವಿಲ್ಲದೆ ಈ ಅಕ್ರಮ ಆದೇಶ ಸಾಧ್ಯವೇ? ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ, ಭ್ರಷ್ಟ ಅಧಿಕಾರಿಯನ್ನು ಅದೇ ಪಂಚಾಯಿತಿಯಲ್ಲಿ ಕೂರಿಸಲು ಆಡಳಿತಾತ್ಮಕವಾಗಿ ರಕ್ಷಣೆ ನೀಡುತ್ತಿರುವ ಹಿಂದಿನ ರಹಸ್ಯವೇನು?" ಎಂದು ಅವರು ಪ್ರಶ್ನಿಸಿದ್ದಾರೆ.

ಸಮಗ್ರ ತನಿಖೆಗೆ ಆಗ್ರಹ:

ಉಪ್ಪಿನಂಗಡಿ ಗ್ರಾಮ ಪಂಚಾಯಿತಿಯಲ್ಲಿ ಕಳೆದ ಹಲವು ವರ್ಷಗಳಿಂದ ನಡೆದಿರುವ ಕಾಮಗಾರಿಗಳು, ಅನುದಾನ ಬಳಕೆ, ಲೈಸನ್ಸ್ ವಿತರಣೆ, ಎಸ್‌ಸಿ/ಎಸ್‌ಟಿ 25% ಅನುದಾನದ ದುರ್ಬಳಕೆ ಹಾಗೂ ಮಧ್ಯವರ್ತಿಗಳ ಜಾಲದ ಬಗ್ಗೆ ಲೋಕಾಯುಕ್ತ ಹಾಗೂ ಹಿರಿಯ ಅಧಿಕಾರಿಗಳಿಂದ ನಿಷ್ಪಕ್ಷಪಾತ, ಸಮಗ್ರ ತನಿಖೆಯಾಗಬೇಕು. ತಕ್ಷಣವೇ ಆ ಅಧಿಕಾರಿಯ ಪ್ರಭಾರ ಆದೇಶವನ್ನು ರದ್ದುಗೊಳಿಸಿ, ಅಮಾನತು ಮಾಡಿ ಸೂಕ್ತ ಶಿಸ್ತುಕ್ರಮ ಜರುಗಿಸಬೇಕು. ಶಾಸಕರಿಗೆ ನೈತಿಕತೆಯಿದ್ದರೆ ತಕ್ಷಣವೇ ಈ ಹಗರಣದ ತನಿಖೆಗೆ ಸರ್ಕಾರವನ್ನು ಒತ್ತಾಯಿಸಲಿ ಎಂದು ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು ಕಟ್ಟುನಿಟ್ಟಾಗಿ ಆಗ್ರಹಿಸಿದ್ದಾರೆ. 

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!