ಪುತ್ತೂರು, ಸೆಪ್ಟೆಂಬರ್ 06 : ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ಯುವಕನೊಬ್ಬ ಪ್ರಾಣಬಿಟ್ಟಿರುವ ದಾರುಣ ಘಟನೆ ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ನಡೆದಿದೆ. ಜಿಮ್‌ನಲ್ಲಿ ಉಸಿರಾಟದ ತೊಂದರೆ ಕಾಣಿಸಿಕೊಂಡು 20 ವರ್ಷದ ಕಾಲೇಜು ವಿದ್ಯಾರ್ಥಿ ಮೃತಪಟ್ಟಿದ್ದಾರೆ
ಆರ್ಯಪು ಗ್ರಾಮದ ಕುಂಜುರ್ಪಂಜ ನಿವಾಸಿ ರಮೇಶ್ ರೈ ಅವರ ಪುತ್ರ, 20 ವರ್ಷದ ಶ್ರಮಿಕ್ ಮೃತಪಟ್ಟ ದುರ್ದೈವಿ. ಶ್ರಮಿಕ್ ಪುತ್ತೂರಿನ ನೆಹರೂನಗರದ ಖಾಸಗಿ ಕಾಲೇಜಿನ ಅಂತಿಮ ವರ್ಷದ ಬಿ.ಕಾಮ್ ವಿದ್ಯಾರ್ಥಿಯಾಗಿದ್ದರು. ಸೆಪ್ಟೆಂಬರ್ 5ರ ಶನಿವಾರ ಪುತ್ತೂರಿನ ಬೋಳುವಾರು ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದ ವೇಳೆ ಏಕಾಏಕಿ ಉಸಿರಾಟದ ತೊಂದರೆ ಅನುಭವಿಸಿ ಅಸ್ವಸ್ಥರಾಗಿದ್ದಾರೆ. ಕೂಡಲೇ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತಾದರೂ, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಪ್ರಾಥಮಿಕವಾಗಿ ಹೃದಯಾಘಾತವೇ ಸಾವಿಗೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ.