BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

Priority to School Children's Safety; Awareness Programme Held for Bus Drivers and Owners in Mangaluru ಶಾಲಾ ಮಕ್ಕಳ ಸುರಕ್ಷತೆಗೆ ಆದ್ಯತೆ; ಮಂಗಳೂರಿನಲ್ಲಿ ಬಸ್ ಚಾಲಕರು, ಮಾಲೀಕರಿಗೆ ಜಾಗೃತಿ ಕಾರ್ಯಕ್ರಮ


ಮಂಗಳೂರು,ಸೆಪ್ಟೆಂಬರ್ 02 : ಶಾಲಾ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಶಾಲಾ ಬಸ್ ಚಾಲಕರು, ನಿರ್ವಾಹಕರು ಹಾಗೂ ಆಡಳಿತ ಮಂಡಳಿಗಾಗಿ ಜಾಗೃತಿ ಕಾರ್ಯಕ್ರಮವನ್ನು ನಗರದಲ್ಲಿ ಆಯೋಜಿಸಲಾಗಿತ್ತು. 

ಶಾಲಾ ಮಕ್ಕಳ ಸುರಕ್ಷಿತ ಪ್ರಯಾಣವನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಮಂಗಳೂರು ನಗರ ಸಂಚಾರ ಪೊಲೀಸ್ ವತಿಯಿಂದ ಮಂಗಳೂರಿನ ಪುರಭವನದಲ್ಲಿ ಮಂಗಳವಾರ ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ನಗರದ ವಿವಿಧ ಶಾಲೆಗಳ ಶಾಲಾ ಬಸ್ ಚಾಲಕರು, ಮಾಲೀಕರು, ಬಸ್ ವ್ಯವಸ್ಥಾಪಕರು ಹಾಗೂ ಆಡಳಿತ ಮಂಡಳಿಯ ಸುಮಾರು 600ಕ್ಕೂ ಹೆಚ್ಚು ಮಂದಿ ಈ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳನ್ನು ಸುರಕ್ಷಿತವಾಗಿ ಕರೆದೊಯ್ಯಲು ಚಾಲಕರು ಮತ್ತು ನಿರ್ವಾಹಕರು ಕಡ್ಡಾಯವಾಗಿ ಪಾಲಿಸಬೇಕಾದ ರಸ್ತೆ ಸುರಕ್ಷತಾ ನಿಯಮಗಳು, ಕಾನೂನು ಮಾರ್ಗಸೂಚಿಗಳು ಹಾಗೂ ಜವಾಬ್ದಾರಿಗಳ ಕುರಿತು ಸಮಗ್ರ ಮಾಹಿತಿ ನೀಡಲಾಯಿತು.

ಸುರಕ್ಷತಾ ಮಾನದಂಡಗಳ ಕಟ್ಟುನಿಟ್ಟಿನ ಪಾಲನೆಗೆ ಸೂಚನೆ

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಡಿ.ಸಿ.ಪಿ. (ಅಪರಾಧ ಮತ್ತು ಸಂಚಾರ) ಅವರು, ಕರ್ನಾಟಕ ಮೋಟಾರು ವಾಹನ (ಶಾಲಾ ಮಕ್ಕಳ ಸಾಗಣೆಯಲ್ಲಿ ತೊಡಗಿರುವ ವಾಹನಗಳ ನಿಬಂಧನೆ) ನಿಯಮ-2012ರ ಪ್ರಕಾರ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದರು. ಶಾಲಾ/ಕಾಲೇಜು 'ಸ್ಕೂಲ್ ಕ್ಯಾಬ್ ಸೇಫಟಿ ಕಮಿಟಿ'ಯು ವಾಹನ ಹಾಗೂ ಚಾಲಕರ ನೈಜ ದಾಖಲೆಗಳು, ಫಿಟ್ನೆಸ್ ಪ್ರಮಾಣಪತ್ರ, ವಿಮೆ, ಅಗ್ನಿಶಾಮಕ ಉಪಕರಣ, ಸ್ಪೀಡ್ ಗವರ್ನರ್ ಅಳವಡಿಕೆ ಮತ್ತು ವಾಹನವು ಮುಚ್ಚಿದ ದೇಹದ ರಚನೆ (Closed Body) ಹೊಂದಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಜೊತೆಗೆ, ಶಾಲಾ ವಾಹನದ ಗರಿಷ್ಠ ವೇಗ ಗಂಟೆಗೆ 40 ಕಿ.ಮೀ. ಮೀರದಂತೆ ಎಚ್ಚರಿಕೆ ವಹಿಸಲು ಸೂಚಿಸಲಾಯಿತು.

ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಯವರು ಮಾತನಾಡಿ, ಅಧಿಕೃತ ಪರ್ಮಿಟ್ ಹೊಂದಿರುವ ವಾಹನಗಳು ಮಾತ್ರ ಮಕ್ಕಳನ್ನು ಸಾಗಿಸಬೇಕು ಮತ್ತು ಇತರೆ ಎಲ್ಲಾ ಸುರಕ್ಷತಾ ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.

ಶಿಕ್ಷಣಾಧಿಕಾರಿಯವರು ಮಾತನಾಡಿ, ಶಾಲಾ ಆಡಳಿತ ಮಂಡಳಿಯು ಆಗಾಗ್ಗೆ ಶಿಕ್ಷಕರು, ಶಾಲಾ ಬಸ್ ಮಾಲೀಕರು, ಚಾಲಕರು ಹಾಗೂ ಪೋಷಕರ ಸಭೆಗಳನ್ನು ನಡೆಸಿ ಮಕ್ಕಳ ಸುರಕ್ಷತೆಯ ಬಗ್ಗೆ ಚರ್ಚಿಸಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ ನೀಡಿದರು.

ಎ.ಸಿ.ಪಿ. ಸಂಚಾರ ಉಪವಿಭಾಗದವರು ಮಾತನಾಡಿ, ಚಾಲಕರು ಕೇವಲ ಸಂಚಾರ ನಿಯಮಗಳನ್ನು ಪಾಲಿಸುವುದು ಮಾತ್ರವಲ್ಲದೆ, ಅತ್ಯಂತ ಶಿಸ್ತು ಮತ್ತು ಜವಾಬ್ದಾರಿಯಿಂದ ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು. ನಿಯಮ ಉಲ್ಲಂಘಿಸುವ ಶಾಲಾ ಬಸ್ ಚಾಲಕರ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಯಿತು.

ಕಾರ್ಯಕ್ರಮದ ಅಂತ್ಯದಲ್ಲಿ ರಸ್ತೆ ಸುರಕ್ಷತೆ ಹಾಗೂ ಸಂಚಾರ ನಿಯಮಗಳ ಪಾಲನೆಯ ಕುರಿತು ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು. ಈ ಸಂದರ್ಭದಲ್ಲಿ ಮಂಗಳೂರು ನಗರ ಸಂಚಾರ ಪೊಲೀಸ್ ಠಾಣೆಗಳ ಎಲ್ಲಾ ಠಾಣಾಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!