ಪಡುಬಿದ್ರಿ,ಸೆಪ್ಟೆಂಬರ್ 04 : ಉಡುಪಿ ಜಿಲ್ಲೆಯ ನಂದಿಕೂರಿನ ಕಾರ್ಕಳ-ಪಡುಬಿದ್ರಿ ರಾಜ್ಯ ಹೆದ್ದಾರಿಯ ಬಸ್ ನಿಲ್ದಾಣದ ಬಳಿ ರಾತ್ರಿ ವೇಳೆ ನಿಲ್ಲಿಸಿದ್ದ ಲಾರಿಯೊಂದರ ಹಿಂಬದಿಗೆ ಸ್ಕೂಟರ್ ಡಿಕ್ಕಿ ಹೊಡೆದ ಪರಿಣಾಮ, ಸವಾರ ಸ್ಥಳದಲ್ಲೇ ತೀವ್ರಗಾಯಗೊಂಡು ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಸುರತ್ಕಲ್ ಕೋಡಿಕರೆ ಪರಿಸರದ ನಿವಾಸಿ ಹಾಗೂ ರಾಯದುರ್ಗ ಮೂಲದ ಮಂಜುನಾಥ ಬೈಲಪ್ಪ ಮುರಗಾಲಿ (21) ಮೃತ ದುರ್ದೈವಿ. ಇವರು ಖಾಸಗಿ ಉದ್ಯೋಗಿಯಾಗಿದ್ದರು.
ಕಾರ್ಕಳ ಕಡೆಯಿಂದ ಸುರತ್ಕಲ್‌ನತ್ತ ತೆರಳುತ್ತಿದ್ದ ಸ್ಕೂಟರ್, ಯಾವುದೇ ಪಾರ್ಕಿಂಗ್ ಲೈಟ್, ಇಂಡಿಕೇಟರ್ ಅಥವಾ ಮುಂಜಾಗ್ರತಾ ಕ್ರಮಗಳಿಲ್ಲದೆ ಹೆದ್ದಾರಿಯಲ್ಲಿ ನಿಲ್ಲಿಸಿದ್ದ ಲಾರಿಯ ಹಿಂಬದಿಗೆ ಡಿಕ್ಕಿಯಾಗಿದೆ. ಮೃತ ಮಂಜುನಾಥ ಅವರಿಗೆ ಒಂದು ವರ್ಷದ ಹಿಂದೆ ಮದುವೆ ನಿಶ್ಚಯವಾಗಿದ್ದು, ಮುಂಬರುವ ನವೆಂಬರ್‌ನಲ್ಲಿ ವಿವಾಹ ನೆರವೇರಬೇಕಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.