ಮೈಸೂರು, ಸೆ 21: ಮೈಸೂರಿನ ಸರಗೂರು ತಾಲೂಕಿನ ಕಾಡಗೆರೆ ಗ್ರಾಮದಲ್ಲಿ ಸಂಭವಿಸಿದ ಕಾಡಾನೆ ದಾಳಿಯಲ್ಲಿ ಓರ್ವ ರೈತ ಸ್ಥಳದಲ್ಲೇ ಮೃತಪಟ್ಟು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ವರದಿಯಾಗಿದೆ.
ಗ್ರಾಮದ ರೈತ ವೀರಭದ್ರೇಗೌಡ ಅಲಿಯಾಸ್ ಸಣ್ಣಪ್ಪ (60) ಮೃತ ದುರ್ದೈವಿ. ಬೈಕ್‌ನಲ್ಲಿ ಜತೆಗಿದ್ದ ಮತ್ತೋರ್ವ ರೈತ ಮಹೇಶ್ ಗಾಯಗೊಂಡಿದ್ದು, ಅವರನ್ನು ತಾಲೂಕಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ವಿವರ:
ಅನಾರೋಗ್ಯದಿಂದ ಬಳಲುತ್ತಿದ್ದ ಸಣ್ಣಪ್ಪ ಹಾಗೂ ಮಹೇಶ್ ಇಬ್ಬರೂ ಒಂದೇ ಬೈಕ್‌ನಲ್ಲಿ ಮೈಸೂರಿಗೆ ತೆರಳುತ್ತಿದ್ದರು. ಈ ವೇಳೆ ಕಾಡಗೆರೆ-ದೊಡ್ಡಬರಗಿ ಗ್ರಾಮದ ಮಧ್ಯೆ ಏಕಾಏಕಿ ಬಂದ ಕಾಡಾನೆ ಬೈಕ್ ಮೇಲೆ ದಾಳಿ ನಡೆಸಿದೆ. ಪರಿಣಾಮ ಸಣ್ಣಪ್ಪ ಅವರು ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ, ಮಹೇಶ್ ಗಾಯಗೊಂಡಿದ್ದಾರೆ. ದಾಳಿಯ ಬಳಿಕ ಆನೆ ಪುನಃ ಅಕಾಡದತ್ತ ತೆರಳಿದೆ.
ಗ್ರಾಮಸ್ಥರ ಆಕ್ರೋಶ:
ಮಹೇಶ್ ಜೋರಾಗಿ ಕಿರುಚಿಕೊಂಡಿದ್ದನ್ನು ಕಂಡು ಜಮೀನಿನಲ್ಲಿದ್ದ ರೈತರು ಧಾವಿಸಿ ಬಂದು ಅರಣ್ಯ ಇಲಾಖೆಗೆ ಮಾಹಿತಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಇಲಾಖೆ ಸಿಬ್ಬಂದಿ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಗ್ರಾಮದಲ್ಲಿ ಪದೇ ಪದೇ ಕಾಡಾನೆಗಳು ಕಾಣಿಸಿಕೊಳ್ಳುತ್ತಿದ್ದರೂ ಅರಣ್ಯ ಇಲಾಖೆ ಯಾವುದೇ ಮುನ್ನೆಚ್ಚರಿಕೆ ಹಾಗೂ ಪರಿಶೀಲನೆ ನಡೆಸಿಲ್ಲ. ಇಲಾಖೆಯ ನಿರ್ಲಕ್ಷ್ಯವೇ ರೈತ ವೀರಭದ್ರೇಗೌಡರ ಸಾವಿಗೆ ಕಾರಣ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.