ಮೂಡುಬಿದಿರೆ, ಸೆಪ್ಟೆಂಬರ್ 01: ಮೂಡುಬಿದಿರೆ ಠಾಣೆಯಲ್ಲಿ ದಾಖಲಾಗಿದ್ದ ಆರು ಕಳ್ಳತನ ಪ್ರಕರಣಗಳ ಆರೋಪಿ ಕುಖ್ಯಾತ 'ಇತ್ತೆ ಬರ್ಪೆ ಅಬೂಬಕ್ಕರ್' ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈತನ ವಿರುದ್ದದ ಆರು ಪ್ರಕರಣಗಳಿಗೆ ವಾರಂಟ್ ಜಾರಿಯಾಗಿತ್ತು.
ಅಬೂಬಕರ್ ಯಾನೆ ಅಬ್ದುಲ್ ಖಾದರ್ ಯಾನೆ ಇತ್ತೆ ಬರ್ಪೆ ಅಬೂಬಕರ್ ಸೇರಿದಂತೆ ಈತನಿಗೆ ಹಲವು ನಾಮಗಳಿವೆ. ಮೂಡುಬಿದಿರೆ ಪೊಲೀಸ್ ಠಾಣೆಯ ವಾರೆಂಟ್ ಜಾರಿ ಕರ್ತವ್ಯದಲ್ಲಿದ್ದ ಹೆಡ್ ಕಾನ್ಸ್‌ಟೇಬಲ್ ರವೀಂದ್ರ, ಪೊಲೀಸ್ ಕಾನ್ಸ್‌ಟೇಬಲ್ ಲಿಂಗೇಶ್ ಹಾಗೂ ಕೋರ್ಟ್ ಕಾನ್ಸ್‌ಟೇಬಲ್ ರಮೇಶ್ ನೇತೃತ್ವದ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ. ಬಂಧಿತ ಆರೋಪಿಯನ್ನು ಮೂಡುಬಿದಿರೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಸೆಪ್ಟಂಬರ್ 15 ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಈ ಹಿಂದೆ 2023 ಮತ್ತು 2025 ರಲ್ಲೂ ಶಿರ್ವ ಮತ್ತು ಉಡುಪಿಯ ಇತರ ಭಾಗಗಳಲ್ಲಿ ಕಳವು ಮಾಡಿದ ಆರೋಪದ ಮೇಲೆ ಈತನನ್ನು ಬಂಧಿಸಲಾಗಿತ್ತು. ಆದರೆ ಜಾಮೀನಿನ ಮೇಲೆ ಹೊರಬಂದು ಮತ್ತೆ ತಲೆಮರೆಸಿಕೊಳ್ಳುತ್ತಿದ್ದನು. ಕಳ್ಳತನ ಮಾಡುವ ಸಂದರ್ಭಗಳಲ್ಲಿ ಅಥವಾ ಜನರಿಂದ ತಪ್ಪಿಸಿಕೊಳ್ಳುವಾಗ ಈತ "ಇತ್ತೆ ಬರ್ಪೆ" (ಈಗಲೇ ಬರ್ತೇನೆ) ಎಂದು ಹೇಳಿ ಪರಾರಿಯಾಗುತ್ತಿದ್ದ ಹಿನ್ನೆಲೆಯಲ್ಲಿ ಈತನಿಗೆ ಈ ವಿಚಿತ್ರ ಅಡ್ಡಹೆಸರು ಬಂದಿದೆ ಎನ್ನಲಾಗಿದೆ.