BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

Mangaluru ಮಂಗಳೂರು ಅಳಿವೆ ಬಾಗಿಲಿನಲ್ಲಿ ಹೂಳು ಸಮಸ್ಯೆ: ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮೀನುಗಾರರ ಸಂಘದಿಂದ ಮನವಿ


ಮಂಗಳೂರು, ಸೆಪ್ಟೆಂಬರ್ 03 : ಮಂಗಳೂರು ಅಳಿವೆ ಬಾಗಿಲಿನಲ್ಲಿ ಕಳೆದ ಹಲವು ವರ್ಷಗಳಿಂದ ಹೂಳೆತ್ತುವ (Dragging)  ಕಾಮಗಾರಿ ನಡೆಯದ ಕಾರಣ ಮೀನುಗಾರಿಕಾ ಬೋಟುಗಳ ಸಂಚಾರಕ್ಕೆ ತೀವ್ರ ತೊಂದರೆಯುಂಟಾಗಿದ್ದು, ಕೂಡಲೇ ತುರ್ತು ಹೂಳೆತ್ತುವ ಕಾಮಗಾರಿಯನ್ನು ಆರಂಭಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ ಮಂಗಳೂರು ಟ್ರಾಲ್ ಬೋಟ್ ಮೀನುಗಾರರ ಸಂಘದ ಪದಾಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಜಿಲ್ಲಾಧಿಕಾರಿಗಳೊಂದಿಗೆ ನಡೆಸಿದ ಚರ್ಚೆಯ ವೇಳೆ ಪದಾಧಿಕಾರಿಗಳು ಅಳಿವೆ ಪ್ರದೇಶದಲ್ಲಿ ಉದ್ಭವಿಸಿರುವ ಗಂಭೀರ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಅಳಿವೆ ಬಾಗಿಲಿನಲ್ಲಿ ಮಣ್ಣು ಮತ್ತು ಹೂಳು ಅಧಿಕವಾಗಿ ತುಂಬಿಕೊಂಡಿರುವುದರಿಂದ ಸಮುದ್ರಕ್ಕೆ ತೆರಳುವ ಮತ್ತು ವಾಪಸ್ ಬರುವ ಮೀನುಗಾರಿಕಾ ಬೋಟುಗಳು ದಡ ಸೇರಲು ಪರದಾಡುವಂತಾಗಿದೆ. ಈವರೆಗೆ ಹೂಳು ತುಂಬಿದ ಪರಿಣಾಮ ಈಗಾಗಲೇ ಎರಡು ಮೀನುಗಾರಿಕಾ ಬೋಟುಗಳು ಅವಘಡಕ್ಕೀಡಾಗಿ ನೀರಿನಲ್ಲಿ ಮುಳುಗಿಹೋಗಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಜೀವ ಮತ್ತು ಆಸ್ತಿಪಾಸ್ತಿಗಳಿಗೆ ಕುತ್ತು:

ಮೀನುಗಾರಿಕೆಯೇ ನಂಬಿಕೆಯಾಗಿರುವ ನೂರಾರು ಕುಟುಂಬಗಳಿಗೆ ಈ ಅಳಿವೆ ಬಾಗಿಲಿನ ಸಂಚಾರವೇ ಜೀವನಾಡಿಯಾಗಿದೆ. ಆದರೆ ಹೂಳಿನ ಸಮಸ್ಯೆಯಿಂದಾಗಿ ಬೋಟುಗಳು ಮಗುಚಿಬೀಳುವ ಅಥವಾ ಮರಳಿನ ದಿಬ್ಬಗಳಿಗೆ ಅಪ್ಪಳಿಸುವ ಅಪಾಯ ಪ್ರತಿದಿನ ಎದುರಾಗಿದೆ. ಇದರಿಂದ ಮೀನುಗಾರರ ಜೀವಕ್ಕೆ ಹಾಗೂ ಕೋಟ್ಯಂತರ ರೂ. ಬೆಲೆಬಾಳುವ ಆಸ್ತಿಪಾಸ್ತಿಗಳಿಗೆ ತೀವ್ರ ಸ್ವರೂಪದ ಅಪಾಯ ಎದುರಾಗಿದ್ದು, ಜಿಲ್ಲಾಡಳಿತವು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸಂಘದ ಮುಖಂಡರು ಆಗ್ರಹಿಸಿದರು.

ಮೀನುಗಾರರ ಈ ಸಂಕಷ್ಟಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಅಳಿವೆ ಬಾಗಿಲಿನಲ್ಲಿ ಬಾಕಿ ಉಳಿದಿರುವ ಹೂಳೆತ್ತುವ ಹಾಗೂ ತೆರವು ಕಾರ್ಯಾಚರಣೆಗಳನ್ನು ಶೀಘ್ರವೇ ಕೈಗೊಳ್ಳಲು ಅಗತ್ಯ ಕ್ರಮ ವಹಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಸಂಘದ ಪ್ರಮುಖರು ತಿಳಿಸಿದ್ದಾರೆ.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!