ಮಂಗಳೂರು,ಸೆಪ್ಟೆಂಬರ್ 14 : ಮಂಗಳೂರಿನ ಬಂಟ್ಸ್ ಹಾಸ್ಟೆಲ್‌ನಲ್ಲಿ ಸಿದ್ಧಿವಿನಾಯಕ ಪ್ರತಿಷ್ಠಾನದ ಆಶ್ರಯದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವವು ಅತ್ಯಂತ ಶ್ರದ್ಧಾ-ಭಕ್ತಿ ಹಾಗೂ ವ್ಯವಸ್ಥಿತವಾಗಿ ಆರಂಭಗೊಂಡಿದೆ. ಈ ಗಣೇಶೋತ್ಸವವನ್ನು ಉದ್ಘಾಟಿಸುವ ಸುಯೋಗ ಸತತ ಎರಡನೇ ಬಾರಿ ತನಗೆ ಒದಗಿಬಂದಿರುವುದು ತನ್ನ ಸುದೈವ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅಭಿಪ್ರಾಯಪಟ್ಟಿದ್ದಾರೆ.
ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಬಂಟ್ಸ್ ಹಾಸ್ಟೆಲ್‌ನಲ್ಲಿ ಆಯೋಜಿಸಲಾಗಿರುವ ಸಾರ್ವಜನಿಕ ಶ್ರೀ ಗಣೇಶೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸಂಸದ ಕ್ಯಾ. ಬ್ರಿಜೇಶ್ ಚೌಟ, ಪ್ರಧಾನಮಂತ್ರಿಗಳ ಸ್ವಚ್ಛ ಭಾರತದ ಆಶಯದಂತೆ ಪ್ರತಿಯೊಬ್ಬರೂ ಪರಿಸರಕ್ಕೆ ಪೂರಕವಾಗಿ ಗಣೇಶೋತ್ಸವಗಳನ್ನು ಆಚರಿಸುವಂತಾಗಬೇಕು ಎಂದು ಕರೆ ನೀಡಿದರು.
ಧ್ವಜಾವರೋಹಣಗೈದು ಮಾತನಾಡಿದ ಗ್ರೂಪ್ ಕ್ಯಾಪ್ಟನ್ ಎಸ್.ಎಂ. ಅಡ್ಯಂತಾಯ, ಬಂಟ ಸಮುದಾಯವು ಶ್ರೀಮಂತ ಪರಂಪರೆಯ ಹಿನ್ನೆಲೆ ಹೊಂದಿದ್ದು, ಶಿಕ್ಷಣ, ಆಡಳಿತ, ವೈದ್ಯಕೀಯ ಹಾಗೂ ಕಾನೂನು ಮುಂತಾದ ಪ್ರಮುಖ ಕ್ಷೇತ್ರಗಳಲ್ಲಿ ಸಮಾಜಕ್ಕೆ ಅದ್ವಿತೀಯ ಕೊಡುಗೆ ನೀಡಿದೆ ಎಂದರು.
ಈ ಸಂದರ್ಭದಲ್ಲಿ ಮಾತೃ ಸಂಘದ ಮಾಜಿ ಉಪಾಧ್ಯಕ್ಷ ರವೀಂದ್ರನಾಥ ಜಿ. ಹೆಗ್ಡೆ ಹಾಗೂ ನಳಿನಿ ಆರ್. ಹೆಗ್ಡೆ ತೆನೆ ವಿತರಿಸಿದರು.
ಕಾರ್ಯಕ್ರಮದಲ್ಲಿ ಗೀತಾ ಅಡ್ಯಂತಾಯ, ಮಾಳವಿಕಾ ಜಯಾನಂದ್, ದಂಬೆಕಾನ ಸದಾಶಿವ ರೈ, ಪದ್ಮನಾಭ ರೈ, ಬಜಪೆ ಬಂಟರ ಸಂಘದ ಅಧ್ಯಕ್ಷ ವೇಣುಗೋಪಾಲ್ ಶೆಟ್ಟಿ, ಜಪ್ಪಿನಮೊಗರು ಬಂಟರ ಸಂಘದ ಅಧ್ಯಕ್ಷ ಜೆ. ಸತ್ಯಪ್ರಸಾದ್ ಶೆಟ್ಟಿ, ಶೇಖರ ಶೆಟ್ಟಿ ಹಾಗೂ ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿ ಸದಾಶಿವ ಶೆಟ್ಟಿ ಬಿಜೈ ಮತ್ತಿತರರು ಉಪಸ್ಥಿತರಿದ್ದರು.
ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಪ್ರಸ್ತಾವಿಕವಾಗಿ ಮಾತನಾಡುತ್ತಾ ಸ್ವಾಗತಿಸಿದರು. ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಜಯಶೀಲ ಅಡ್ಯಂತಾಯ ಅಡ್ಯಾರುಗುತ್ತು ವಂದಿಸಿದರು ಮತ್ತು ಭಾಗ್ಯರಾಜ್ ಶೆಟ್ಟಿ ಹರೇಕಳ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ವಿಶೇಷವಾಗಿ ಜಿಲ್ಲಾಧಿಕಾರಿ ದರ್ಶನ್ ದಂಪತಿಗಳನ್ನು ಹಾಗೂ ಪ್ರತಿಭಾವಂತ ಬಾಲ ಸಂಗೀತ ಪ್ರತಿಭೆ ಅಜಿಂತ್ಯ ರೈ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.