BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ಉಡುಪಿ

MLA Sunil Kumar ಕಾರ್ಕಳ ಸಮಗ್ರ ಅಭಿವೃದ್ಧಿ ಹಾಗೂ ಮಹಾಮಸ್ತಕಾಭಿಷೇಕಕ್ಕೆ ವಿಶೇಷ ಅನುದಾನಕ್ಕೆ ಆಗ್ರಹ: ಮುಖ್ಯಮಂತ್ರಿಯನ್ನು ಭೇಟಿಯಾದ ಶಾಸಕ ವಿ. ಸುನಿಲ್ ಕುಮಾರ್


ಕಾರ್ಕಳ, ಸೆಪ್ಟೆಂಬರ್ 09: ಮುಂಬರುವ ಐತಿಹಾಸಿಕ ಶ್ರೀ ಗೊಮ್ಮಟೇಶ್ವರ ಸ್ವಾಮಿಯ ಮಹಾಮಸ್ತಕಾಭಿಷೇಕ ಹಾಗೂ ಕಾರ್ಕಳ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಾರ್ಯಗಳ ಕುರಿತು ಕಾರ್ಕಳ ಶಾಸಕ ಹಾಗೂ ಮಾಜಿ ಸಚಿವ ವಿ. ಸುನಿಲ್ ಕುಮಾರ್ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಹನ್ನೆರಡು ವರ್ಷಗಳಿಗೊಮ್ಮೆ ಜರುಗುವ ಜೈನರ ಮಹಾಪವಿತ್ರ ಐತಿಹಾಸಿಕ ಮಹಾಮಸ್ತಕಾಭಿಷೇಕವು 2027ರ ಫೆಬ್ರವರಿ 18ರಿಂದ 10 ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ. ಈ ಮಹೋತ್ಸವಕ್ಕೆ ದೇಶ-ವಿದೇಶಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ಹಾಗೂ ಪ್ರವಾಸಿಗರು ಆಗಮಿಸಲಿದ್ದು, ಕಾರ್ಕಳದಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ತುರ್ತಾಗಿ ಕಲ್ಪಿಸಬೇಕಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದಿಂದ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಮಂಗಳೂರು ಸಚಿವ ಸಂಪುಟ ಸಭೆಯತ್ತ ಕರಾವಳಿಯ ನಿರೀಕ್ಷೆ:

ಸೆಪ್ಟೆಂಬರ್ 18, 2026ರಂದು ಮಂಗಳೂರಿನಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಿಗದಿಯಾಗಿರುವ ಹಿನ್ನೆಲೆಯಲ್ಲಿ, ಕರಾವಳಿ ಭಾಗದ ಸಮಗ್ರ ಹಾಗೂ ದೀರ್ಘಕಾಲಿಕ ಅಭಿವೃದ್ಧಿಗೆ ಪೂರಕವಾದ ಶಾಶ್ವತ ಯೋಜನೆಗಳನ್ನು ರೂಪಿಸಲು ಶಾಸಕರು ಆಗ್ರಹಿಸಿದರು. ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸಬೇಕು ಎಂಬ ಕರಾವಳಿಗರ ಬಹುದಿನಗಳ ಬೇಡಿಕೆಯನ್ನು ಸಂಪುಟ ಸಭೆಯ ಮುಂದಿಟ್ಟು ಮಂಜೂರಾತಿ ನೀಡುವಂತೆ ಕೋರಿದರು. ಕರಾವಳಿಯ ಪ್ರವಾಸೋದ್ಯಮ, ಕಂಬಳ ಕ್ರೀಡೆ, ಮೂಲಸೌಕರ್ಯ, ಉದ್ಯೋಗ ಹಾಗೂ ನೀರಾವರಿ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡುವಂತೆ ಮನವಿ ಮಾಡಲಾಗಿದೆ.

ಸಭೆಯಲ್ಲಿ ಕಾರ್ಕಳದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಲಾಗಿದ್ದು, ಬಾಕಿ ಇರುವ ಅನುದಾನ ಬಿಡುಗಡೆ ಹಾಗೂ ನೂತನ ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ಕೋರಲಾಗಿದೆ. ರಾಜ್ಯ ಸರ್ಕಾರದಿಂದ ಇದಕ್ಕೆ ಸಕಾರಾತ್ಮಕ ಸ್ಪಂದನೆ ಸಿಗುವ ವಿಶ್ವಾಸವಿದೆ ಎಂದು ಶಾಸಕ ವಿ. ಸುನಿಲ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ಮುಖ್ಯಮಂತ್ರಿಗಳ ಗಮನಕ್ಕೆ ತಂದ ಪ್ರಮುಖ ಬೇಡಿಕೆಗಳು:

ಮಹಾಮಸ್ತಕಾಭಿಷೇಕ: ಗೊಮ್ಮಟೇಶ್ವರಸ್ವಾಮಿ ಮಹಾಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಅನುದಾನ.

ಭಾಷೆ ಮತ್ತು ಸಂಸ್ಕೃತಿ: ತುಳು ಭಾಷೆಯನ್ನು ರಾಜ್ಯದ 2ನೇ ಅಧಿಕೃತ ಭಾಷೆಯಾಗಿ ಘೋಷಿಸುವುದು ಹಾಗೂ ಕಂಬಳ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ.

ರಸ್ತೆ ಸಂಪರ್ಕ: ಕಾರ್ಕಳ ಪುರಸಭೆ ಹಾಗೂ ಗ್ರಾಮೀಣ ರಸ್ತೆ ಅಭಿವೃದ್ಧಿ; ವಿಶೇಷವಾಗಿ ಹಿರಿಯಡ್ಕ–ಕಾರ್ಕಳ–ಜೋಡುರಸ್ತೆ–ಮಿಯ್ಯಾರು–ಬಜಗೋಳಿ ಮಾರ್gವಾಗಿ ಗುರುವಾಯನಕೆರೆವರೆಗೆ ರಸ್ತೆ ಅಭಿವೃದ್ಧಿ.

ಪ್ರವಾಸೋದ್ಯಮ ತಾಣಗಳು: ಪರಶುರಾಮ ಥೀಮ್ ಪಾರ್ಕ್‌ ಅಭಿವೃದ್ಧಿ, ರಾಮಸಮುದ್ರ ಕೆರೆ ಹಾಗೂ ಉದ್ಯಾನವನ, ವರಂಗ ಚತುರ್ಮುಖ ಕೆರೆ ಬಸದಿ ಹಾಗೂ ಕೂಡ್ಲು ಫಾಲ್ಸ್‌ (ನಾಡಪಾಲು) ಅಭಿವೃದ್ಧಿ.

ಉದ್ಯೋಗ ಹಾಗೂ ಕೈಗಾರಿಕೆ: ಯುವಕರಿಗೆ ಸ್ವಯಂ ಉದ್ಯೋಗಕ್ಕಾಗಿ ಕಾರ್ಕಳದಲ್ಲಿ ಶಿಲ್ಪಕಲಾ ಹಾಗೂ ಫರ್ನಿಚರ್ ಹಬ್ ಸ್ಥಾಪನೆ ಹಾಗೂ ಜವಳಿ ಪಾರ್ಕ್ ಯೋಜನೆ.

ಆರೋಗ್ಯ ಮತ್ತು ಶಿಕ್ಷಣ: ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರವನ್ನು 100 ಹಾಸಿಗೆಗಳ ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವುದು ಹಾಗೂ ಕಾರ್ಕಳ ನರ್ಸಿಂಗ್ ಕಾಲೇಜಿಗೆ ನೂತನ ಕಟ್ಟಡ.

ನೀರಾವರಿ: ಹೆಬ್ರಿ ತಾಲೂಕಿನ ಬೇಳಂಜೆ ಗ್ರಾಮದ ಇಕ್ಕೊಡ್ಡು ಬಳಿ ಏತ ನೀರಾವರಿ ಯೋಜನೆ ಅನುಷ್ಠಾನ.


📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!