ಮಂಗಳೂರು,ಸೆಪ್ಟೆಂಬರ್ 16: ರಸ್ತೆ ಅಪಘಾತದಲ್ಲಿ ಗಂಭೀರಗೊಂಡು ಮೆದುಳು ನಿಷ್ಕ್ರಿಯಗೊಂಡಿದ್ದ ಕುತ್ತಾರ್ ಬಟ್ಟೆದಡಿ ನಿವಾಸಿ, ಡಿವೈಎಫ್‌ಐ ಸಕ್ರಿಯ ಕಾರ್ಯಕರ್ತ ವರ್ಷಿತ್ ಕುಲಾಲ್ (21) ಅವರು ಸೋಮವಾರ ಸಂಜೆ ನಿಧನರಾಗಿದ್ದಾರೆ.
ಕುತ್ತಾರ್ ಭಾಗದಲ್ಲಿ ನಡೆದ ರಸ್ತೆ ಅಪಘಾತದಿಂದಾಗಿ ತೀವ್ರವಾಗಿ ಗಾಯಗೊಂಡಿದ್ದ ವರ್ಷಿತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಬ್ರೇನ್ ಡೆಡ್ (ಮೆದುಳು ನಿಷ್ಕ್ರಿಯ) ಆಗಿರುವುದಾಗಿ ವೈದ್ಯರು ತಿಳಿಸಿದಾಗ ಕುಟುಂಬಸ್ಥರಿಗೆ ಬರಸಿಡಲು ಎರಚಿದಂತಾಗಿತ್ತು.
ಅಂಗಾಂಗ ದಾನದ ಮೂಲಕ ಮಾದರಿ:
ಕಣ್ಣೆದುರೇ ಬೆಳೆದ ಯುವ ಮಗನನ್ನು ಕಳೆದುಕೊಂಡ ದುಃಖದಲ್ಲೂ ಆ ಹೆತ್ತವರು ಮತ್ತು ಕುಟುಂಬದವರು ಮಹತ್ವದ ಹಾಗೂ ಮಾನವೀಯ ನಿರ್ಧಾರ ಕೈಗೊಂಡಿದ್ದಾರೆ. ತಂದೆ ಗೋಪಾಲ, ತಾಯಿ ವೇದಾವತಿ ಹಾಗೂ ಸಹೋದರ ತಮ್ಮ ಮಗನ ಅಂಗಾಂಗಗಳನ್ನು ದಾನ ಮಾಡಲು ಒಪ್ಪಿಗೆ ಸೂಚಿಸುವ ಮೂಲಕ ಇತರೆ ಹಲವು ರೋಗಿಗಳಿಗೆ ಹೊಸ ಜೀವನ ನೀಡಲು ಮುಂದಾಗಿದ್ದಾರೆ.
ಸಮಾಜಮುಖಿ ಹೋರಾಟಗಾರ:
ಜನರಿಗಾಗಿ ಮತ್ತು ಸಮಾಜದ ಪರವಾಗಿ ಸದಾ ಮುಂಚೂಣಿಯಲ್ಲಿ ನಿಲ್ಲುತ್ತಿದ್ದ ವರ್ಷಿತ್, ಮರಣದ ಬಳಿಕವೂ ಅಂಗಾಂಗ ದಾನದ ಮೂಲಕ ಹಲವು ಜೀವಗಳಲ್ಲಿ ಜೀವಂತವಾಗಿರಲಿದ್ದಾರೆ. ಯುವ ಹೋರಾಟಗಾರನ ಈ ಅಕಾಲಿಕ ಅಗಲಿಕೆಗೆ ಡಿವೈಎಫ್‌ಐ ಸಂಘಟನೆ ಹಾಗೂ ಸ್ಥಳೀಯರು ತೀವ್ರ ಸಂತಾಪ ಸೂಚಿಸಿದ್ದು, ಅವರ ಆದರ್ಶಗಳು ಮತ್ತು ನೆನಪುಗಳು ಸದಾ ಚಿರಸ್ಮರಣೀಯವಾಗಿರಲಿವೆ ಎಂದು ಒಡನಾಡಿಗಳು ಸ್ಮರಿಸಿದ್ದಾರೆ.