ಮಂಗಳೂರು, ಸೆ. 19 : ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಅಧ್ಯಕ್ಷರಾದ ಶ್ರೀ ಸಂತೋಷ್ ಕುಮಾರ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ, ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಎಲ್.ಕೆ. ಆತೀಕ್ ಅವರ ಉಪಸ್ಥಿತಿಯಲ್ಲಿ ಮಂಗಳೂರಿನ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಹತ್ವದ ಸಭೆ ನಡೆಯಿತು.
ಸಭೆಯಲ್ಲಿ ಮಂಗಳೂರಿನಲ್ಲಿ ಕೈಗೆತ್ತಿಕೊಳ್ಳಬೇಕಿರುವ ವಿವಿಧ ಅಭಿವೃದ್ಧಿ ಕಾರ್ಯಗಳ ಅನುಷ್ಠಾನ, ಯೋಜನೆಗಳ ಪ್ರಗತಿ ಹಾಗೂ ಭವಿಷ್ಯದ ಅಭಿವೃದ್ಧಿ ಕಾರ್ಯತಂತ್ರಗಳ ಕುರಿತು ಸಮಗ್ರವಾಗಿ ಚರ್ಚಿಸಲಾಯಿತು. ವಿಶೇಷವಾಗಿ ಕೋಸ್ಟಲ್ ರೋಡ್ ಅಭಿವೃದ್ಧಿ ಸೇರಿದಂತೆ ನಗರದ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸುವ ಯೋಜನೆಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಯಿತು.
ಮಂಗಳೂರಿನ ಬೆಳವಣಿಗೆಗೆ ಅಗತ್ಯವಿರುವ ಪ್ರಮುಖ ಯೋಜನೆಗಳನ್ನು ಸಮನ್ವಯದೊಂದಿಗೆ ಅನುಷ್ಠಾನಗೊಳಿಸುವುದು, ವಿವಿಧ ಇಲಾಖೆಗಳ ನಡುವೆ ಸಹಕಾರ ಹೆಚ್ಚಿಸುವುದು ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡುವ ಕುರಿತು ಸಭೆಯಲ್ಲಿ ಒತ್ತು ನೀಡಲಾಯಿತು.
ಸಭೆಯಲ್ಲಿ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ , ಮಂಗಳೂರು ನಗರ ಪಾಲಿಕೆ ಆಯುಕ್ತರಾದ ರಾಹುಲ್ ರತನ್ ಪಾಂಡೆ, ಮುಡಾ ಆಯುಕ್ತರಾದ ಮೊಹಮ್ಮದ್ ನಜೀರ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಡಾ. ಜಿ. ಸಂತೋಷ್ ಕುಮಾರ್ ಸೇರಿದಂತೆ ಸಂಬಂಧಪಟ್ಟ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.